ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಭರಾಟೆ ತೀವ್ರಗೊಳ್ಳುತ್ತಿದ್ದಂತೆ ಚುನಾವಣೆ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಚುನಾವಣೆಯ ಸಂಭಾವನೆ (ಭತ್ಯೆ) ಪರಿಷ್ಕರಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಭತ್ಯೆ ಪರಿಷ್ಕರಣೆಯಲ್ಲಿ ಸಿಂಹಪಾಲು ಐಪಿಎಸ್ ಅಧಿಕಾರಿಗಳಿಗೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ, ಕೆಳ ಹಂತದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾತ್ರ ಅಲ್ಪ ಪ್ರಮಾಣದಲ್ಲಿ ಭತ್ಯೆ ಪರಿಷ್ಕರಣೆಗೊಂಡು ಭಾರೀ ನಿರಾಸೆ ಮೂಡಿಸಿದೆ.
ಹೌದು, ಪೊಲೀಸರು ಇಲ್ಲದೇ ಚುನಾವಣಾ ರಣರಂಗದಲ್ಲಿ ಶಾಂತಿಯುತ ಚುನಾವಣೆ ನಿರೀಕ್ಷಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ತೀವ್ರ ಹಣಾಹಣಿಗೆ ಚುನಾವಣೆಗಳು ಸಾಕ್ಷಿಯಾಗುತ್ತಿದೆ. ಇಡೀ ಚುನಾವಣೆ ಯಶಸ್ವಿನ ಹಿಂದೆ ಪೊಲೀಸರ ಪರಿಶ್ರಮ ಇದ್ದೇ ಇರುತ್ತದೆ. ಆದರೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಚುನಾವಣಾ ಭತ್ಯೆ ಪರಿಷ್ಕರಣೆ ಕೆಲ ಪೊಲೀಸ್ ಅಧಿಕಾರಿಗಳಿಗೆ ಸಿಹಿ ತಂದರೆ ಕೆಳ ಹಂತದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಲ್ಲಿ ತೀವ್ರ ಬೇಸರ ಮೂಡಿದೆ.
ಬಂಪರ್ ಕೊಡುಗೆ: ಮತದಾನಕ್ಕೆ 22 ದಿನ ಮಾತ್ರ ಬಾಕಿ ಇದೆ. ಈಗಾಗಲೇ ಚುನಾವಣೆ ಬಂದೋಬಸ್ತಿನಲ್ಲಿ ಮನೆ ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡಲು ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸರ್ಕಾರ ಚುನಾವಣೆ ಭತ್ಯೆ ಪರಿಷ್ಕರಿಸುವ ಮೂಲಕ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಪೊಲೀಸ್ ಸಿಬ್ಬಂದಿಗೆ ಬಂಪರ್ ಕೊಡುಗೆ ನೀಡಿದೆ.
ಹಿಂದಿನ ಚುನಾವಣೆಯಲ್ಲಿ ಎಸ್ಪಿಗೆ 5000 ನಿಗದಿ: ಈ ಹಿಂದೆ 2018 ರ ಚುನಾವಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂದರೆ ಎಸ್ಪಿಗೆ 5,000 ರೂ., ಪೊಲೀಸ್ ಇನ್ಸ್‌ಪೆಕ್ಟರ್ ಹಂತದ ಅಧಿಕಾರಿಗೆ 5,000, ಆರಕ್ಷಕ ಉಪ ನಿರೀಕ್ಷಕರಿಂದ ಹಿಡಿದು ಸಹಾಯಕರ ಆರಕ್ಷಕ ಉಪ ನಿರೀಕ್ಷರಿಗೆ, ಹೆಡ್ ಕಾನ್ ಸ್ಟೇಬಲ್, ಕಾನ್‌ಸ್ಟೆàಬಲ್‌ಗೆ ಪ್ರತಿ ದಿನಕ್ಕೆ 350 ರೂ. ನೀಡಲಾಗುತ್ತಿತ್ತು. ಗೃಹ ರಕ್ಷಕರಿಗೆ, ಅರಣ್ಯ ಇಲಾಖೆ ಅರಣ್ಯ ಇಲಾಖೆ ಗಾರ್ಡ್‌ಗಳಿಗೆ ಮಾಜಿ ಸೈನಿಕರಿಗೆ 150 ರೂ. ನೀಡಲಾಗುತ್ತಿತ್ತು. ಎಸ್ಪಿಗೆ ಪ್ರಸ್ತುತ 7000: ಆದರೆ, ಪರಿಷ್ಕೃತ ಆದೇಶದಲ್ಲಿ ತಿಳಿಸಿರುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ 5000 ರಿಂದ 7000 ಸಾವಿರಕ್ಕೆ ಚುನವಣೆ ಭತ್ಯೆ ಪರಿಷ್ಕರಣೆಗೊಂಡಿದ್ದರೆ, ಆರಕ್ಷಕ ವೃತ್ತ ನಿರೀಕ್ಷಕರಿಗೆ (ಸಿಪಿಐ) 700, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಂತದ ಅಧಿಕಾರಿಗಳಿಗೆ 500 ರೂ. ಹಾಗೂ ಎಎಸ್‌ಐ, ಹೆಡ್ ಕಾನ್‌ಸ್ಟೇಬಲ್, ಕಾನ್‌ಸ್ಟೇಬಲ್‌ಗೆ ದಿನವೊಂದಕ್ಕೆ 500 ರೂ.ಭತ್ಯೆ ಸಿಗಲಿದೆ. ಗೃಹ ರಕ್ಷಕರಿಗೆ, ಅರಣ್ಯ ಇಲಾಖೆ ಗಾರ್ಡ್‌ಗಳಿಗೆ, ಗ್ರಾಮ ರಕ್ಷಾ ದಳದ ಸಿಬ್ಬಂದಿ, ಎನ್‌ಸಿಸಿ ಹಾಗೂ ಮಾಜಿ ಸೈನಿಕರಿಗೆ 250 ರೂ. ಭತ್ಯೆ ಸಿಗಲಿದೆ ಎಂದು ರಾಜ್ಯ ಒಳಾಡಳಿತ ಇಲಾಖೆ (ಪೊಲೀಸ್ ವೆಚ್ಚ) ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎನ್.ವನಜಾ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಗೃಹ ರಕ್ಷಕರ ಭತ್ಯೆ ತೀರಾ ಭತ್ಯೆ ಕಡಿಮೆ!: ಗೃಹ ರಕ್ಷಕರಿಗೆ ಸರ್ಕಾರ ಚುನಾವಣೆ ಭತ್ಯೆ ಪ್ರತಿ ದಿನಕ್ಕೆ ಕೇವಲ 250 ರೂ. ನಿಗದಿಗೊಳಿಸಿದೆ. ಇದು ನರೇಗಾ ಕೂಲಿ ಹಣಕ್ಕಿಂತ ಕಡಿಮೆ ಎನ್ನುವ ಅಸಮಾಧಾನ, ಸಿಟ್ಟು, ಆಕ್ರೋಶ ಗೃಹ ರಕ್ಷಕರಲ್ಲಿದೆ. ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸದಾ ಬೆನ್ನೆಲುಬು ಆಗಿರುವ ಗೃಹ ರಕ್ಷಕರಿಗೆ 150 ರಿಂದ 250 ರೂ.ಗೆ ಭತ್ಯೆ ಹೆಚ್ಚಿಸಿದರೂ ಅದು ಅತ್ಯಂತ ಕಡಿಮೆ ಎನ್ನುವ ಅಸಮಾಧಾನ ಗೃಹ ರಕ್ಷಕರಲ್ಲಿದೆ.
-ಕಾಗತಿ ನಾಗರಾಜಪ್ಪ