ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಡೆಂಘೀಗೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಬಿಬಿಎಂಪಿ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ.
ಜನವರಿಯಿಂದ ಈವರೆಗೂ ರಾಜ್ಯದಲ್ಲಿ 622 ಡೆಂಘೀಗೆ ಸೋಂಕಿತರ ಪ್ರಕರಣಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲೇ ಹೆಚ್ಚು 254 ಪ್ರಕರಣ ದೃಢಪಟ್ಟಿವೆ. ಇನ್ನು ಕಳೆದ ಒಂದು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿ ಆಸ್ಪತ್ರೆಗಳ 80 ಮಂದಿಯಲ್ಲಿ ರೋಗ ದೃಢಪಟ್ಟಿದೆ.
ಇವುಗಳ ಜತೆಗೆ ಚಿಕುನ್‌ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನವರಿಯಿಂದ ಇಲ್ಲಿಯವರೆಗೂ ರಾಜ್ಯಾದ್ಯಂತ 301 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 23 ವರದಿಯಾಗಿದೆ. ಅಲ್ಲದೇ ನಗದಲ್ಲಿ ಮಳೆ ಆರಂಭವಾಗಿರುವುದರಿಂದ ಪ್ರಕರಣಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳಿಗೆ ಸೂಚಿಸಿದೆ.
ಸಾರ್ವಜನಿಕರು ಡೆಂಘೀಗೆ ಹಾಗೂ ಚಿಕನ್‌ಗುನ್ಯಾ ಜ್ವರಕ್ಕೆ ಕಾರಣವಾಗಿರುವ ಸೊಳ್ಳೆಗಳ ಉತ್ಪಾದನೆಗೆ ಅವಕಾಶ ನೀಡದಂತೆ ಮನೆಗಳ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ರೋಗ ಲಕ್ಷಣಗಳು, ಸಾಮಾನ್ಯ ಜ್ವರ ಕಂಡು ಬಂದರೂ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಕುರಿತು ಬಿಬಿಎಂಪಿಯಿಂದ ಅಗತ್ಯ ಇರುವ ಕಡೆಗಳಲ್ಲಿ ಫಾಗಿಂಗ್ ಮಾಡಲಾಗುವುದು, ಮನೆ ಮನೆ ಭೇಟಿ ನೀಡಿ ಲಾರ್ವ ನಾಶ ಪಡಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.