Advertisement
ನಗರದಲ್ಲಿ ಗುರುವಾರ 17 ಮಂದಿಗೆ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 844ಕ್ಕೆ ಏರಿಕೆಯಾದಂತಾಗಿದೆ. ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ 14 ಮಂದಿ ಬಿಡುಗಡೆಯಾಗಿದ್ದು, ಇನ್ನೂ 408 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನ ಹಿನ್ನೆಲೆ: ಪ್ರತಿದಿನ ಅನಾರೋಗ್ಯದಿಂದ ಸೋಂಕಿಗೆ ಒಳಗಾಗುವವರ ಸಂಖ್ಯೆ 30ಕ್ಕಿಂತ ಅಧಿಕವಾಗಿರುತ್ತಿತ್ತು.
Related Articles
Advertisement
239ಕ್ಕೇರಿದ ಕಂಟೈನ್ಮೆಂಟ್ ವಲಯ: ಪ್ರತಿನಿತ್ಯ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದು, ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಕಳೆದ 2 ದಿನಗಳಲ್ಲಿ 31 ಕಂಟೈನ್ಮೆಂಟ್ ವಲಯ ಹೆಚ್ಚಳವಾಗಿದ್ದು, ಗುರುವಾರದ ಅಂತ್ಯಕ್ಕೆ 239 ಪ್ರದೇಶಗಳಲ್ಲಿ ಕಂಟೈನ್ಮೆಂಟ್ ಜಾರಿಯಲ್ಲಿದೆ. ಒಟ್ಟಾರೆ 277 ಪ್ರದೇಶಗಳಲ್ಲಿ ಸೋಂಕಿತರು ಪತ್ತೆಯಾಗಿದ್ದು, 38 ಪ್ರದೇಶಗಳಲ್ಲಿ ಕಂಟೈನ್ಮೆಂಟ್ ತೆರವು ಮಾಡಲಾಗಿದೆ.
ಬಿಎಂಟಿಸಿಯಲ್ಲಿ ನಾಲ್ಕಕ್ಕೇರಿದ ಸೋಂಕು: ರಾಜರಾಜೇಶ್ವರಿ ನಗರ ಬಿಎಂಟಿಸಿ ಘಟಕದ ಚಾಲಕನೊಬ್ಬನಲ್ಲಿ ಕೋವಿಡ್ 19 ಕಾಣಿಸಿಕೊಂಡಿದ್ದು, ಈ ಮೂಲಕ ಸಂಸ್ಥೆಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಕೆ.ಆರ್. ಮಾರುಕಟ್ಟೆ-ಹಾಗಲಹಳ್ಳಿ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ತಿಂಗಳು ಸುದೀರ್ಘ ರಜೆಯಲ್ಲಿದ್ದ ಸೋಂಕಿತ ಚಾಲಕರು, ಹತ್ತು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಜೂ. 11ರಂದು ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಸ್ವಂತ ಊರು ಮೈಸೂರಿನ ಎಚ್.ಡಿ.ಕೋಟೆ ಸಮೀಪದ ಹಳ್ಳಿಗೆ ತೆರಳಿದ್ದರು.
ಜೂ. 12ರಂದು ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಮೈಸೂರಿನಲ್ಲಿ ಸೋಂಕು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದು, ಅದರಂತೆ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದಾರೆ. ಭಾನುವಾರ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ, ವಾರದ ಹಿಂದೆಯೇ ಅವರು ಕರ್ತವ್ಯ ಮುಗಿಸಿರುವುದರಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದವರು ತುಂಬಾ ವಿರಳ ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಾಲ್ವರು ಸೊಂಕಿತರಲ್ಲಿ ಬಿಎಂಟಿಸಿ ಸಿಬ್ಬಂದಿಯಲ್ಲಿ ಮೂವರು ಚಾಲಕರಾಗಿದ್ದಾರೆ.