ದಾವಣಗೆರೆ: ತಂತ್ರಜ್ಞಾನ ಹೆಚ್ಚಾದಂತೆ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿದ್ದು, ಸೈಬರ್ ಅಪರಾಧಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಎಸ್‌ಪಿ ಹನುಮಂತರಾಯ ಹೇಳಿದರು.
ಮಹಾನಗರಪಾಲಿಕೆ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೈಬರ್ ಕ್ರೈಂ ಜಾಗೃತಿ ಅಭಿಯಾನ-2020 ವಿಡಿಯೋ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ನಮ್ಮ ಜೀವನ ಶೈಲಿಯಿಂದಾಗಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿವೆ. ಇದರೊಂದಿಗೆ ಹೊಸ ಹೊಸ ರೀತಿಯ ಸಂವಹನ ವ್ಯವಸ್ಥೆಗಳು ಬಳಕೆಯಾಗುತ್ತಿದ್ದು, ಹೆಚ್ಚಾಗಿ ಇದರ ಅಕ್ರಮ ಬಳಕೆ ನಡೆಯುತ್ತಿವೆ. ಇದನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸೈಬರ್ ಪೊಲೀಸ್ ಠಾಣೆ ತೆರೆಯಲಾಗಿದೆ. ಜಿಲ್ಲೆಯಲ್ಲಿ 2018ರಲ್ಲಿ 15, 2019ರಲ್ಲಿ 44 ಹಾಗೂ 2020ರಲ್ಲಿ 46 ಪ್ರಕರಣಗಳು ಸೇರಿದಂತೆ ಒಟ್ಟು ಈವರೆಗೆ 105 ಸೈಬರ್‌ಅಪರಾಧ ಪ್ರಕರಣಗಳು ಕಂಡು ಬಂದಿವೆ. ಪ್ರಸಕ್ತ ವರ್ಷ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಈ ಬಗ್ಗೆ ಮಾಹಿತಿ ಇದ್ದವರು ಮಾತ್ರ ದೂರು ನೀಡುತ್ತಿರುವುದು ಬೇಸರದ ಸಂಗತಿ ಎಂದರು.
ಸೈಬರ್ ಅಪರಾಧ ಎಸಗುವವರು ರೈತರು, ಅವಿದ್ಯಾವಂತರು, ಸಣ್ಣಪುಟ್ಟ ವ್ಯಾಪಾರಿಗಳು, ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ವರ್ಗದವರು ಜಾಗೃತರಾಗಬೇಕು. ಅಪರಾಧ ತಡೆಗೆ ಪ್ರತಿಯೊಬ್ಬರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕಿದೆ. ಪಾಲಿಕೆ ವತಿಯಿಂದ ವಾಣಿಜ್ಯ ಮಳಿಗೆದಾರರಿಗೆ ಲೈಸೆನ್ಸ್ ನೀಡುವಾಗ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವ ಕುರಿತು ಸೂಚನೆ ನೀಡುವ ಮೂಲಕ ಸಿಸಿ ಕ್ಯಾಮೆರಾ ಅಳಡಿಕೆಯನ್ನು ಕಡ್ಡಾಯಗೊಳಿಸಲು ಕ್ರಮ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾನಗರಪಾಲಿಕೆ ಮೇಯರ್ ಬಿ.ಜಿ.ಅಜಯ ಕುಮಾರ್ ಮಾತನಾಡಿ, ಜಾಗೃತಿ ಕಾರ್ಯಕ್ರಮವು ಹೊಸ ಬದಲಾವಣೆ ತರಲು ಸಹಕಾರಿಯಾಗುವ ಜತೆಗೆ ಮೋಸ ಹೋಗುವವರನ್ನು ತಡೆಯಲು ಉಪಯುಕ್ತವಾಗಿದೆ ಎಂದರು.
ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಜಿಲ್ಲಾ ಸೈಬರ್ ಪೊಲೀಸ್ ಇನ್‌ಸ್ಪೆಕ್ಟರ್ ಮುಸ್ತಾಕ್ ಅಹಮ್ಮದ್, ಉಪ ಮೇಯರ್ ಸೌಮ್ಯ ನರೇಂದ್ರಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಪ್ರಸನ್ನ ಕುಮಾರ್, ಗೌರಮ್ಮ ಗಿರಿರಾಜ್, ಜಯಮ್ಮ ಗೋಪಿನಾಥ್, ಮಹಾನಗರಪಾಲಿಕೆಯ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿವೈಎಸ್‌ಪಿ ಬಸವರಾಜ್ ಸೇರಿದಂತೆ ಪಾಲಿಕೆಯ ಸದಸ್ಯರು ಹಾಜರಿದ್ದರು.