ಚಳ್ಳಕೆರೆ: ಯುವ ಸಮೂಹದ ಭವಿಷ್ಯವನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಮೇಲಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಉಪನ್ಯಾಸಕರು ಕಾರ್ಯನಿರ್ವಹಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾಂಗ ವಿಭಾಗದ ಜಂಟಿ
ಉಪನಿರ್ದೇಶಕ ಪಿ.ಎನ್. ಕೃಷ್ಣಪ್ರಸಾದ್ ಹೇಳಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಎಸ್‌ಡಿಎಂಸಿ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 30 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪ್ರತಿಯೊಂದು ಹಂತದಲ್ಲೂ ನನಗೆ ಎಲ್ಲರಿಂದ ದೊರೆತ ಸಹಕಾರದಿಂದ ಇಂದು ಶಿಕ್ಷಣ ಇಲಾಖೆಯ ಉನ್ನತ ಹುದ್ದೆಯನ್ನು ಅಲಂಕರಿಸಿದ್ದೇನೆ. ಆದರೆ ಬೋಧನೆಯಿಂದ ಸಿಗುವ ಪ್ರೀತಿ, ವಿಶ್ವಾಸ, ಗೌರವವನ್ನು ಈ ಹುದ್ದೆಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಪಿಯು ಮಂಡಳಿಯ ಪರೀಕ್ಷಾ ವಿಭಾಗದಲ್ಲಿ ಕಾರ್ಯನಿರ್ವಹಿಸುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಿದೆ ಎಂದರು.
ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಸಿ. ಮಂಜುನಾಥ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್. ಲಕ್ಷ್ಮಣ್, ಉಪನ್ಯಾಸಕರಾದ ಜಬೀವುಲ್ಲಾ, ಸುರೇಶ್, ಚಂದ್ರಶೇಖರ್, ಜಯಂತ್ ಮಾತನಾಡಿದರು. ಪ್ರಭಾರಿ ಪ್ರಾಚಾರ್ಯ ರವೀಶ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಕೆ.ವಿ. ಚಂದ್ರಶೇಖರ್, ವಸಂತಕುಮಾರ್, ಹಬಿಬುಲ್ಲಾ, ಗುರುಸಿದ್ದಸ್ವಾಮಿ, ಪುಷ್ಪಲತಾ, ನಾಗರಾಜು, ಸೋಮಶೇಖರ್ ಇತರರು ಇದ್ದರು.