Advertisement
ರಾಜ್ಯದಲ್ಲಿ ಬೆಂಗಳೂರಿನ ದೇವನ ಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅನಂತರದ 2ನೇ ಅತಿದೊಡ್ಡ ವಿಮಾನ ನಿಲ್ದಾಣ ಮಂಗಳೂರಿನದ್ದು. ಆದರೆ ಬೆಂಗಳೂರಿನಂತೆಯೇ ಇದಕ್ಕೆ ಇಲ್ಲಿನ ಯುಗ ಪುರುಷರ ಹೆಸರು ಇಡಬೇಕೆಂಬ ಒತ್ತಾಯ ಇತ್ತು. ಈಗ ಅದಕ್ಕೆ ಮರು ಜೀವ ಬಂದಿದ್ದು, ಕರಾವಳಿ ಪ್ರದೇಶದ ಕೆಲವು ಸಂಘಟನೆಗಳು ಈ ಪ್ರದೇಶದ ವೀರ ಪುರುಷರು ಅಥವಾ ವನಿತೆಯರ ಹೆಸರನ್ನಿಡಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ. ಇದಕ್ಕೆ ಪೂರಕವಾಗಿಯೇ ಕೆಲವು ದಿನಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸುವುದಕ್ಕೆ ಕೆಲವು ಬಿಲ್ಲವ ಸಮುದಾಯದವರು ಸಭೆ ಸೇರಿ ನಿರ್ಣಯ ತೆಗೆದುಕೊಂಡಿದ್ದರು.
ಒತ್ತಾಯ ಈ ಹಿಂದೆಯೂ ಜೋರಾಗಿ ಕೇಳಿ ಬಂದಿತ್ತು. ವೀರರಾಣಿ ಅಬ್ಬಕ್ಕ ಹೆಸರಿಡುವ ಬಗ್ಗೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಮಾ. 7ರಂದು ನಡೆದ ಜಿ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಇನ್ನೊಂದೆಡೆ, ಮಂಗಳೂರು ವಿಮಾನ ನಿಲ್ದಾಣಕ್ಕೆ ‘ವೀರ ರಾಣಿ ಅಬ್ಬಕ್ಕ’ನವರ ಹೆಸರಿಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಸಚಿವ ಯು.ಟಿ. ಖಾದರ್ ಅವರು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ರಾಣಿ ಅಬ್ಬಕ್ಕ ಉತ್ಸವದಲ್ಲಿ ಭರವಸೆ ನೀಡಿದ್ದರು. ಈ ನಡುವೆ, ಮಂಗಳೂರು ವಿಮಾನ ನಿಲ್ದಾಣವನ್ನು ಆರಂಭಿಸಿದ ಕೀರ್ತಿ ಯು. ಶ್ರೀನಿವಾಸ ಮಲ್ಯ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರ ಹೆಸರನ್ನು ಇಡಬೇಕೆಂಬ ದೊಡ್ಡ ಮಟ್ಟದ ಬೇಡಿಕೆ ಕೂಡ ಇದೆ.
Related Articles
Advertisement
ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ ಎಂಬ ಕಾರಣಕ್ಕೆ ಅವರ ಕೊಡುಗೆ ಆಧರಿಸಿ ಸಾಕಷ್ಟು ರಾಜಕೀಯ ಒತ್ತಡ ಹಾಗೂ ಜನ ಸಂಘಟನೆಗಳ ಹೋರಾಟದ ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿದೆ. ಹೀಗಿರುವಾಗ, ಮಂಗಳೂರು ವಿಮಾನ ನಿಲ್ದಾಣಕ್ಕೂ ಇಲ್ಲಿನ ಮಹಾಪುರುಷರು ಅಥವಾ ವೀರ ವನಿತೆಯ ಹೆಸರನ್ನು ಏಕೆ ಇಡಬಾರದು ಮತ್ತು ಆ ದಿಕ್ಕಿನಲ್ಲಿ ಜನಪ್ರತಿನಿಧಿಗಳು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವ ಜತೆಗೆ ಜನ ಸಂಘಟನೆಗಳು ಕೂಡ ಹೋರಾಟಕ್ಕೆ ಮುಂದಾಗಬೇಕು ಎನ್ನುವುದು ಕರಾವಳಿಗರ ಆಗ್ರಹ.
ಪ್ರಧಾನಿಗೆ ಪತ್ರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ರ ಹೆಸರು ನಾಮಕರಣ ಮಾಡಬೇಕು ಎಂದು ಬೆಳ್ತಂಗಡಿ ತಾಲೂಕಿನ ಶಿಬಾಜೆಯ ವಿಜೇತ್ ಅವರು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ 12 ಪುಟಗಳ ಪತ್ರವನ್ನು ಕಳುಹಿಸುವ ಮೂಲಕ ಮನವಿ ಮಾಡಿದ್ದಾರೆ. ಮನವಿ ಮಾಡುತ್ತೇನೆ
ಮಂಗಳೂರು ವಿಮಾನ ನಿಲ್ದಾಣದ ಹೆಸರು ಬದಲಾವಣೆ ಆದರೆ ಒಳ್ಳೆಯದು. ಈ ಸಂಬಂಧ ರಾಜ್ಯ ಸರಕಾರಕ್ಕೆ ಮನವಿ ಬಂದರೆ ಖಂಡಿತವಾಗಿಯೂ ಜಿಲ್ಲಾ ಸಂಸದರನ್ನೊಳಗೊಂಡಂತೆ ನಾನು ಕೂಡ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಮನವಿ ಮಾಡುತ್ತೇನೆ.
– ಯು. ಟಿ. ಖಾದರ್,
ನಗರಾಭಿವೃದ್ಧಿ ಸಚಿವ ವಿರೋಧ ಇಲ್ಲ
ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರ ಪುರುಷರ ಅಥವಾ ವೀರ ಮಹಿಳೆಯರ ಹೆಸರನ್ನಿಡುವುದಕ್ಕೆ ನನ್ನ ವಿರೋಧ ಇಲ್ಲ. ಯಾವುದೇ ಸಂಘಟನೆಗಳು ಈ ಬಗ್ಗೆ ಬೇಡಿಕೆ ಇಟ್ಟರೆ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು.
- ನಳಿನ್ ಕುಮಾರ್ ಕಟೀಲು,
ಜಿಲ್ಲಾ ಸಂಸದ ವಿಶೇಷ ವರದಿ