Advertisement
2017ರಲ್ಲಿ ಗ್ರಾಮೀಣ ಮೂಲಭೂತ ಸೌಲಭ್ಯ ನಬಾರ್ಡ್ ಯೋಜನೆಯಡಿ 8.5 ಕೋಟಿ ರೂ. ಅನುದಾನದಲ್ಲಿ ಹಲಗೇರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆಯನ್ನು 50 ಹಾಸಿಗೆಯಿಂದ 100 ಹಾಸಿಗೆ ಮೇಲ್ದರ್ಜೆಗೇರಿಸಲು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಭೂಮಿಪೂಜೆ ನೆರವೇರಿಸಿದ್ದರು. ಕಟ್ಟಡ ಕಾಮಗಾರಿ 2019ರಲ್ಲಿ ಸಂಪೂರ್ಣ ಮುಗಿದು ಸುಂದರ ಹಾಗೂ ಸುಸಜ್ಜಿತ ಆಸ್ಪತ್ರೆಯಾಗಿ ಕಂಗೊಳಿಸುತ್ತಿದೆ. ಆದರೆ, 50 ರಿಂದ 100 ಹಾಸಿಗೆ ಪರಿವರ್ತಿಸುವ ಕಾರ್ಯ ಮಾತ್ರ ಇಂದಿಗೂ ಕೈಗೂಡಿಲ್ಲ. ಈ ಕುರಿತು ಸ್ಥಳೀಯ ಆಡಳಿತ ವೈದ್ಯಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿದ್ದ ಪ್ರಸ್ತಾವನೆ ಸಚಿವಾಲಯದಲ್ಲಿ ಧೂಳು ಹಿಡಿದಿದ್ದು, ಈ ಕುರಿತು ಕಾಯಕಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.
Related Articles
Advertisement
ಹಲಗೇರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆ ಹಾಗೂ ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ಸಾರ್ವಜನಿಕ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಒಬ್ಬರೇ ಆಡಳಿತ ವೈದ್ಯಾಧಿಕಾರಿ ಇದ್ದು, ಇಲ್ಲಿನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸುಮಾರು 100 ಮಕ್ಕಳು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 20ಕ್ಕೂ ಅಧಿಕ ಮಕ್ಕಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 50ಕ್ಕೂ ಅಧಿಕ ಸಂಖ್ಯೆಯಲ್ಲಿ ಗರ್ಭಿಣಿಯರು ಹೆರಿಗೆ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಮಕ್ಕಳ ತಜ್ಞರಾದ ಡಾ| ಚಂಪಾ ಮಾವಿನತೋಪ ಎರಡು ಆಸ್ತೆಗಳಲ್ಲಿ ನಿರಾಶವಾಗಿ ಸೇವೆ ಸಲ್ಲಿಸುತ್ತಾರೆ ಎಂಬುದು ತಾಯಂದಿರ ಅಭಿಪ್ರಾಯವಾಗಿದೆ.
ಪ್ರಯೋಗಾಲಯ ಕೊರತೆ: ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೂರ್ಣಪ್ರಮಾಣದ ಪ್ರಯೋಗಾಲಯವೇ ಇಲ್ಲ. ಮಕ್ಕಳ ಹೆಚ್ಚಿನ ರಕ್ತ ತಪಾಸಣೆಗೆ 1 ಕಿಮೀ ದೂರದ ಹಲಗೇರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಆಸ್ಪತ್ರೆಯಿಂದ ಆ ಆಸ್ಪತ್ರೆಗೆ ತೆರಳಲು ಅಟೋಗೆ ಕನಿಷ್ಟ 100 ರೂ. ನೀಡಬೇಕಾಗುವುದು ಎಂಬುದು ರೋಗಿಗಳ ಆರೋಪ.
100 ಹಾಸಿಗೆಗೆ ಪರಿವರ್ತಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಮಂಜೂರ ಆದ ನಂತರ 100 ಹಾಸಿಗೆಯ ಚಿಕಿತ್ಸೆ ದೊರೆಯಲಿದೆ. ಇಲ್ಲಿನ ವೈದ್ಯರು ಇದ್ದ ಸೌಲಭ್ಯಗಳಲ್ಲಿ ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ವರೆಗೂ ಯಾವುದೇ ತೊಂದರೆಯಾಗಿಲ್ಲ. –ಡಾ| ಗೋವಿಂದ, ಸಾರ್ವಜನಿಕ ಆಸ್ಪತ್ರೆ, ಆಡಳಿತ ವೈದ್ಯಾಧಿಕಾರಿ
ಗ್ರಾಮೀಣ ಮೂಲಭೂತ ಸೌಲಭ್ಯ ನಬಾರ್ಡ್ ಯೋಜನೆಯಡಿ 8.5 ಕೋಟಿ ಅನುದಾನದಲ್ಲಿ 50 ರಿಂದ 100 ಹಾಸಿಗೆಗೆ ಮೇಲ್ದರ್ಜೆಗೆ ಪರಿವರ್ತಿಸಲಾಗಿದೆ. ಈ ಕುರಿತು ವೈದ್ಯಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ, ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚಿಸಿ ಜರೂರ ಮಂಜೂರು ಮಾಡಲಾಗುವುದು-ಅರುಣಕುಮಾರ ಪೂಜಾರ, ಶಾಸಕ
-ಮಂಜುನಾಥ ಎಚ್ ಕುಂಬಳೂರ