ಹಾಸನ: ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅಪೂರ್ಣ ಮಾಹಿತಿ ನೀಡಿ ಲೋಪವೆಸಗಿದ್ದು, ಅವರ ನಾಮ ನಿರ್ದೇಶನವನ್ನು ತಿರಸ್ಕರಿಸಬೇಕು ಎಂದು ಸಲ್ಲಿಸಿದ್ದ ದೂರಿನ ಬಗ್ಗೆ ವಿಭಾಗೀಯ ಆಯುಕ್ತರು ಭಾನುವಾರ ವಿಚಾರಣೆ ನಡೆಸಿದ್ದಾರೆ.
ಅವರಿಗೆ ಅಗತ್ಯ ದಾಖಲೆಗಳನ್ನು ನಾವು ನೀಡಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಮೈಸೂರು ವಿಭಾಗೀಯ ಆಯುಕ್ತರ ಮುಂದೆ ವಕೀಲರೊಂದಿಗೆ ಹಾಜರಾಗಿದ್ದ ಮಂಜು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವಾಗ ತಮ್ಮ ಆಸ್ತಿ ವಿವರದಲ್ಲಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದೆವು. ಅವರು ಕ್ರಮ ಕೈಗೊಳ್ಳದೆ ನಾಮಪತ್ರ ಅಂಗೀಕರಿಸಿ ದೂರಿನ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದರು.
ಈ ಸಂಬಂಧ ವಿಭಾಗೀಯ ಆಯುಕ್ತರು ವಿಚಾರಣೆ ನಡೆಸಿದರು. ತಾವು ಮತ್ತು ಅವರ ತಾಯಿ ಭವಾನಿ ರೇವಣ್ಣ ಅವರು ಕಂಪನಿಯೊಂದರಲ್ಲಿ ಹೊಂದಿರುವ ಷೇರುಗಳ ಬಗ್ಗೆ ಪ್ರಜ್ವಲ್ ಮಾಹಿತಿ ನೀಡಿರಲಿಲ್ಲ. ಆಕ್ಷೇಪಣೆಗಳ ನಂತರ ಆ ಕಂಪನಿಯಿಂದ ಹೊರ ಬಂದಿರುವುದಾಗಿ ಹೇಳಿದ್ದರು.
ಆದರೆ, ಅವರು ಈಗಲೂ ಕಂಪನಿಯಲ್ಲಿ ಸಹಭಾಗಿತ್ವ ಹೊಂದಿದ್ದು, ಆ ಬಗ್ಗೆ ದಾಖಲೆ ಒದಗಿಸಿದ್ದೇವೆ. ವಿಭಾಗೀಯ ಆಯುಕ್ತರು ಈ ಸಂಬಂಧ ಮುಖ್ಯ ಚುನಾವಣಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.