Advertisement

ಯಡ್ತರೆ, ಪಡುವರಿ ಗ್ರಾಮಗಳಲ್ಲಿ ಈ ವರ್ಷವೂ ತಪ್ಪದ ನೀರಿನ ಗೋಳು

01:38 AM Mar 17, 2020 | Sriram |

ಬೈಂದೂರು ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಲು ಟೆಂಡರ್‌ ಬಾಕಿ, ತಾಂತ್ರಿಕ ಕಾರಣ, ವನ್ಯಜೀವಿ, ಅರಣ್ಯ ಇಲಾಖೆಯ ಅನುಮತಿ ಸಿಗದಿದ್ದುದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ಸಾಕಾರಗೊಂಡಿಲ್ಲ.

Advertisement

ಬೈಂದೂರು: ಬೇಸಗೆ ಆರಂಭವಾಗಿದ್ದು ಇದರ ಬೆನ್ನಲ್ಲೇ ಬೈಂದೂರು ತಾಲೂಕಿನ ಯಡ್ತರೆ, ಪಡುವರಿ ಗ್ರಾಮಗಳಲ್ಲಿ ಈ ವರ್ಷವೂ ನೀರಿನ ಗೋಳು ಮುಂದುವರಿದಿದೆ.

ಸಾಕಾರಗೊಳ್ಳದ ಯೋಜನೆ
ಕಳೆದ ಎರಡು ದಶಕಗಳಿಂದ ಬೈಂದೂರು ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಕೂಗು ಅರಣ್ಯ ರೋದನವಾಗಿದೆ. ಶಿರೂರು, ಬೈಂದೂರು, ಯಡ್ತರೆ, ಪಡುವರಿ, ತಗ್ಗರ್ಸೆ ಮುಂತಾದ ಗ್ರಾಮಗಳ ಜನರಿಗೆ ಅನುಕೂಲವಾಗಿಸುವ ಉದ್ದೇಶದಿಂದ ಕೊಸಳ್ಳಿ ಜಲಪಾತದಿಂದ ನೀರನ್ನು ತರುವ ಬಹುಗ್ರಾಮ ಯೋಜನೆ ಗಗನಕುಸುಮವಾಗಿಯೇ ಟೆಂಡರ್‌ ಬಾಕಿ ಇದೆ ಎನ್ನುವ ಉತ್ತರ ಬಂದರೂ ತಾಂತ್ರಿಕ ಕಾರಣ, ವನ್ಯಜೀವಿ, ಅರಣ್ಯ ಇಲಾಖೆಯ ಅನುಮತಿ ಸಿಗದಿದ್ದರಿಂದ ಇನ್ನೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಾಕಾರಗೊಂಡಿಲ್ಲ. ಸುಮನಾವತಿ ನದಿಗೆ ಸುಬ್ಬರಡಿಯಲ್ಲಿ ಸೇತುವೆ ನಿರ್ಮಿಸಿದ ಬಳಿಕ ನೀರು ದೊರೆಯುವ ನಿರೀಕ್ಷೆ ಇದೆ. ಇದರೊಂದಿಗೆ ಹಾಲಿ ಶಾಸಕರು ವಾರಾಹಿ ನೀರನ್ನು ಬೈಂದೂರಿಗೆ ತರುವ ಬಗ್ಗೆ ಚಿಂತನೆ ನಡೆಸಿದ್ದು ಇವೆರಡೂ ಯೋಜನೆಗಳು ನಿರೀಕ್ಷೆಯನ್ನು ಇನ್ನೂ ಹಸಿರಾಗಿರಿಸಿವೆ.

ಪಡುವರಿಯಲ್ಲಿ ಕಳೆದ ವರ್ಷದ ನೀರಿನ ಬಿಲ್‌ ಬಾಕಿ
ಪಡುವರಿ ಗ್ರಾಮ ಪಂಚಾಯತ್‌ನಲ್ಲಿ ಟ್ಯಾಂಕರ್‌ ನೀರು ಪೂರೈಕೆಗೆ ಕಳೆದ ವರ್ಷ 11 ಲ.ರೂ. ವೆಚ್ಚವಾಗಿದೆ. 4 ಲಕ್ಷ ರೂ. ನೀರಿನ ಬಿಲ್‌ ಜಿಲ್ಲಾಡಳಿತ ಕೊಡಲು ಬಾಕಿಯಿದ್ದು ನೀರು ಸರಬರಾಜು ಮಾಡುವವರು ಪಂಚಾಯತ್‌ ಅಧ್ಯಕ್ಷರ ಮನೆ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಹೀಗಾಗಿ ನೀರು ಕೊಟ್ಟು ಅಡಕತ್ತರಿ ಯಲ್ಲಿ ಸಿಕ್ಕಿದ ಪರಿಸ್ಥಿತಿ ಉಂಟಾಗಿದೆ. ಒಟ್ಟು 23 ಗ್ರಾಮ ಪಂಚಾಯತ್‌ಗಳಿಗೆ ಇದೇ ರೀತಿ ನೀರಿನ ಬಿಲ್‌ ಕೊಡಲು ಬಾಕಿ ಇದೆ.

Advertisement

ಬೈಂದೂರಿನಲ್ಲಿ ನಡೆದ ಸಂಸದರ ಜನಸಂಪರ್ಕ ಸಭೆಯಲ್ಲಿ ಕೂಡ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿದ್ದು ಇದುವರೆಗೂ ಹಣ ಪಾವತಿಯಾಗಿಲ್ಲ.ಪಡುವರಿ ಗ್ರಾಮದ ತಾರಾಪತಿ,ಚರ್ಚ್‌ ರೋಡ್‌,ದೊಂಬೆ,ಕರಾವಳಿ ಮುಂತಾದ ಕಡೆ ಪ್ರತಿವರ್ಷ ನೀರಿನ ಸಮಸ್ಯೆ ಇದೆ.

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇದು.

ಯಡ್ತರೆಯಲ್ಲಿ ತಪ್ಪದ ನೀರಿನ ಸಮಸ್ಯೆ
ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಗರ್ಜಿನಹಿತ್ಲು, ಹೊಳ್ಳರಹಿತ್ಲು, ಯಡ್ತರೆ, ಯೋಜನಾ ನಗರ, ಆಲಂದೂರು, ಕಲ್ಲಣಿR ಮುಂತಾದ ಕಡೆ ಪ್ರತೀ ವರ್ಷ ನೀರಿನ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಜಿ.ಪಂ.ಹತ್ತು ಲಕ್ಷ ಅನುದಾನ ನೀಡಿದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ವರ್ಷ ಮಾರ್ಚ್‌ ತಿಂಗಳಿಂದ ನೀರಿನ ಬೇಡಿಕೆ ಆರಂಭವಾಗಿದ್ದು ಕಂದಾಯ ಇಲಾಖೆ ಇದರ ಜವಾಬ್ದಾರಿ ಹೊತ್ತಿದೆ.ಯಡ್ತರೆ ಗ್ರಾಮದಲ್ಲಿ ಒಟ್ಟು 3 ಬಾವಿಗಳು ಹಾಗೂ 5 ಬೋರ್‌ವೆಲ್‌ಗ‌ಳಿವೆ.

ನೀರಿನ ಮೂಲ ಇಲ್ಲದೆ ಸಮಸ್ಯೆ
ಯಡ್ತರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ವರ್ಷ ಯಶಸ್ವಿಯಾಗಿ ನೀರು ಪೂರೈಸಲಾಗಿದೆ. ನೀರಿನ ಮೂಲ ಇಲ್ಲದಿರುವುದರಿಂದ ಹೆಚ್ಚಿನ ಸಮಸ್ಯೆ ಇಲ್ಲಿ ಉಂಟಾಗುತ್ತದೆ.ಈ ವರ್ಷ ತಹಶೀಲ್ದಾರರ ನೇತ್ವದಲ್ಲಿ ನೀರು ಸರಬರಾಜು ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಕೂಡ ನೀರಿನ ಸಮಸ್ಯೆ ಇದೆ.
– ರುಕ್ಕನ್‌ ಗೌಡ,
ಪಂಚಾಯತ್‌ ಅಭಿವೃದ್ದಿ ಅಧಿಕಾರಿ,ಯಡ್ತರೆ.

ಟೆಂಡರ್‌ದಾರರಿಗೆ ಹಣ ಪಾವತಿಸಿಲ್ಲ ಪಡುವರಿ ಗ್ರಾಮದಲ್ಲಿ ಕಳೆದ ವರ್ಷದ 4 ಲಕ್ಷ ರೂ. ಹಣ ಇದುವರೆಗೆ ಜಿಲ್ಲಾಡಳಿತ ನೀಡಿಲ್ಲ. ಟೆಂಡರ್‌ ದಾರರಿಗೆ ಸೂಕ್ತ ಸಮುದಾಯದಲ್ಲಿ ಹಣ ಪಾವತಿಸಬೇಕಾದ ಜವಾಬ್ದಾರಿ ಗ್ರಾ.ಪಂ.ಗಳದ್ದಾಗಿದೆ. ಈ ರೀತಿಯಾದರೆ ಪಂಚಾಯತ್‌ಗಳ ಅಭಿವೃದ್ದಿ ಕಷ್ಟ. ಜನಪ್ರತಿನಿಧಿ ಗಳು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಮತ್ತು ಈ ವರ್ಷ ಸಮರ್ಪಕವಾಗಿ ನೀರು ಪೂರೈಸಬೇಕಾಗಿದೆ.
– ಸದಾಶಿವ ಡಿ. ಪಡುವರಿ,
ಉಪಾಧ್ಯಕ್ಷರು, ಪಡುವರಿ ಗ್ರಾಮಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next