ನವದೆಹಲಿ: 2019-2020ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀಡಲಾಗಿದ್ದ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ (ಅಕ್ಟೋಬರ್ 24, 2020) ತಿಳಿಸಿದೆ.
ಯಾವ ತೆರಿಗೆದಾರರ ಲೆಕ್ಕಪತ್ರಗಳನ್ನು ಆಡಿಟ್ ಮಾಡಬೇಕಾದ ಅಗತ್ಯವಿದೆಯೋ ಅವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು 2021ರ ಜನವರಿ 31ರವರೆಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದೆ.
ತೆರಿಗೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2019-2020ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಜುಲೈ 31ರಿಂದ ನವೆಂಬರ್ 30ರವರೆಗೆ ವಿಸ್ತರಿಸಿ ಮೇ ತಿಂಗಳಿನಲ್ಲಿ ಪ್ರಕಟಣೆ ನೀಡಿತ್ತು.
ಇದನ್ನೂ ಓದಿ:14 ತಿಂಗಳ ಬಳಿಕ ಬಿಡುಗಡೆ: ಮೆಹಬೂಬಾ ಮುಫ್ತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಬಿಜೆಪಿ
ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿರುವಂತೆ,ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಕಾಯ್ದೆಯ ಪ್ರಕಾರ 2020ರ ಜುಲೈ 31ರೊಳಗೆ ಸಲ್ಲಿಸಬೇಕು, ಆದರೆ ಕೋವಿಡ್ ಹಿನ್ನೆಲೆಯಲ್ಲಿ 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.