ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಲೋಕಸಭೆಯಲ್ಲಿ 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ಹೊಸದಾಗಿ ಬಂಡವಾಳ ಹೂಡುವ ಕಂಪನಿಗಳಿಗೆ ತೆರಿಗೆ ವಿನಾಯ್ತಿ ನೀಡಿದೆ. 5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂದು ಘೋಷಿಸಿದೆ.
ಉತ್ಪಾದನಾ ವಲಯದಲ್ಲಿ ಕಾರ್ಪೋರೇಟ್ ತೆರಿಗೆ ಶೇ.15ರಷ್ಟು ಇಳಿಕೆ ಮಾಡಿದೆ. ಇದರಿಂದ ಹೊಸದಾಗಿ ಹೂಡಿಗೆ ಮಾಡುವ ಕಂಪನಿಗಳಿಗೆ ರಿಲೀಫ್ ಸಿಕ್ಕಂತಾಗಿದೆ.
ಹೊಸ ಆದಾಯ ತೆರಿಗೆ ನೀತಿ ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ವೈಯಕ್ತಿಕ ತೆರಿಗೆ ಆದಾಯದಿಂದ 40 ಸಾವಿರ ಕೋಟಿ ರೂಪಾಯಿ ನಿರೀಕ್ಷೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಈ ಸಂದರ್ಭದಲ್ಲಿ ಹೇಳಿದರು.
5ಲಕ್ಷದಿಂದ 7.5 ಲಕ್ಷದವರೆಗೆ ಶೇ.10ರಷ್ಟು ತೆರಿಗೆ, 7.5 ಲಕ್ಷದಿಂದ 10 ಲಕ್ಷದವರೆಗೆ ಆದಾಯಕ್ಕೆ ಶೇ.15 ರಷ್ಟು ತೆರಿಗೆ.
10ರಿಂದ 12.5 ಲಕ್ಷದವರೆಗಿನ ಆದಾಯಕ್ಕೆ ಶೇ.20ರಷ್ಟು ತೆರಿಗೆ, 12.5ರಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ.25ರಷ್ಟು ತೆರಿಗೆ. 15 ಲಕ್ಷ ಮೇಲ್ಪಟ್ಟು ಆದಾಯಕ್ಕೆ ಶೇ.30ರಷ್ಟು ತೆರಿಗೆ.