ಬೆಂಗಳೂರು: ಆದಾಯ ತೆರಿಗೆ ಇಲಾಖೆ ಜೆಡಿಎಸ್, ಕಾಂಗ್ರೆಸ್ ಮುಖಂಡರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿರುವ ಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರ ಇಲಾಖೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಆದಾಯ ತೆರಿಗೆ ಇಲಾಖೆ ಮುಖ್ಯಸ್ಥ ಬಾಲಕೃಷ್ಣನ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಬಾಲಕೃಷ್ಣ ಅವರನ್ನು ಕೂಡಲೇ ಅಧಿಕಾರದಿಂದ ವಜಾಗೊಳಿಸಬೇಕೆಂದು ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
ಬುಧವಾರ ಬೆಳಗ್ಗೆಯಿಂದ ಹಾಸನ, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧೆಡೆ ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿ ರಾಜಕೀಯ ಪ್ರೇರಿತವಾಗಿದೆ. ಬಿಜೆಪಿ ಪ್ರತಿಪಕ್ಷಗಳನ್ನು ಐಟಿ ದಾಳಿ ಮೂಲಕ ಹಣಿಯಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.