Advertisement
ಜೀವನವೆಂಬ ಚಿತ್ರ ವಿಚಿತ್ರವಾದ, ಡೋಲಾಯಮಾನವಾದ ಪಯಣವನ್ನು ಸುಖಕರವಾಗಿ ಹಾಗೂ ಸುರಕ್ಷಿತವಾಗಿ ಪೂರೈಸಲು ಅನೇಕಾನೇಕ ಅತ್ಯುತ್ತಮ ಜೀವನ ಮೌಲ್ಯಗಳ ಅಗತ್ಯ ಇದೆ. ಅಂತಹ ಜೀವನ ಸಾರ್ಥಕಗಳ ಪಂಕ್ತಿಯಲ್ಲಿ ಆಶಾವಾದಿತ್ವಕ್ಕೆ ಅಗ್ರಸ್ಥಾನ, ಪ್ರಾಥಮ್ಯ. ಆಶಾವಾದ ಮಾನವನ ಜೀವಗುಣ. ಇದು ನಮ್ಮನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕರೆದೊಯ್ಯವ ಪ್ರಮುಖ ಪ್ರಸಾಧನ.
Related Articles
Advertisement
ಸದಾ ಆಶಾವಾದಿಯಾಗಿರುವುದು ಕಠಿಣವೇ?ದಿನ ನಿತ್ಯ ಜನಿಸುವ ಭೀಭತ್ಸ ಭಯಂಕರ ಘಟನಾವಳಿಗಳು ಭಸ್ಮಾಸುರನ ಹಾಗೆ ಅಟ್ಟಹಾಸ ಮಾಡುವಾಗ ಆಶಾವಾದಿಯಾಗಿ ಜೀವಿಸುವುದು ಸಾಧ್ಯವೇ? ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಆಶ್ಚರ್ಯಕರವಲ್ಲ. ಈ ಪ್ರಶ್ನೆ ನಿರಂತರ ಆಶಾವಾದಿತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಶಕ್ಯವಾದುದು ಎಂಬ ಭಾವನೆಯನ್ನು ಮನದಲ್ಲಿ ಮೂಡಿಸುತ್ತದೆ. ಕಷ್ಟಬಂದಾಗ ಕುಗ್ಗಿ ಮೌನವಾಗಿ ನಿರಾಶಾವಾದಿಯಾಗುವುದು ಸಾಮಾನ್ಯರ ಪ್ರವೃತ್ತಿ. ಸಾಧನೆಯ ರಸ್ತೆಯಲ್ಲಿ ತೋರುವ ಮುಳ್ಳೇ ನಿರಾಶಾವಾದ. ಅದೊಂದು ಬೃಹತ್ತಾದ ಕಂಟಕ. ಅದೊಂದು ಮನಸ್ಸಿಗೆ ಮಂಕು ಹಿಡಿಸುವ ರೋಗಾಣು, ನಂಜು ತುಣುಕು. ಕಾರ್ಯಸಾಧಕರ ವ್ಯಕ್ತಿತ್ವಕ್ಕೆ ಕೀಳರಿಮೆಯನ್ನು ತಂದಿರಿಸುವ ಸಾಮರ್ಥ್ಯ ನಿರಾಶಾವಾದಕ್ಕಿದೆ. ಬದುಕುವಿಕೆಯ ಪ್ರತಿಕ್ಷಣವೂ ನಿರಾಶಾವಾದಿಯ ಪಾಲಿಗೆ ಅಸಹನೀಯ, ಅರ್ಥಹೀನ. ಹಾಗಿದ್ದರೆ ಇದಕ್ಕಿಲ್ಲವೇ ಪರಿಹಾರ?! ಇದಕ್ಕಿಲ್ಲವೇ ಪರಿಮಾರ್ಜನೆ!? ಖಂಡಿತಾ ಇದೆ. ಎಂತಹುದೇ ವಿಲೋಮವಾದ ವ್ಯತಿರಿಕ್ತವಾದ ವಿಲಕ್ಷಣವಾದ ಸಂದರ್ಭ ಸನ್ನಿವೇಶಗಳಲ್ಲಿ ಹೆದರದ, ಮಾನಸಿಕ ಸಮತೋಲನವನ್ನು ಕಳೆದುಕೊಳ್ಳದ, ಸದಾ ರಾರಾಜಿಸುವ ವ್ಯಕ್ತಿತ್ವ ಪ್ರಶಂಸೆಗೆ ಅರ್ಹ. ಅದು ಆಶಾವಾದದ ಪ್ರಪ್ರಥಮ ಕುರುಹು. ಮಾನಸದಲ್ಲಿ ಋಣಾತ್ಮಕ, ನಿಷೇಧಾರ್ಥಕ, ನಿಷೇಧಾತ್ಮಕ ಯೋಚನೆಗಳು ಉದಯಿಸಿದಾಗ ಅದಕ್ಕೆ ತದ್ವಿರುದ್ಧವಾದ ಅಂದರೆ ಧನಾತ್ಮಕ, ಶ್ಲಾಘ್ಯ ವಿಚಾರಗಳತ್ತ ಬಲವಂತವಾಗಿ ಚಿತ್ತವನ್ನು ಸಾಗಿಸಬೇಕು. ವಿವಿಧ ರಚನಾತ್ಮಕ ಕ್ರಿಯೆಗಳಲ್ಲಿ ಸಮಯವನ್ನು ಕಳೆದು, ಬದುಕಿನ ಸವಿ ಘಳಿಗೆಗಳನ್ನು ಆಸ್ವಾದಿಸಿ, ಪ್ರಫುಲ್ಲಿತರಾಗಿ ಜೀವಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ನಿರಾಶಾದಾಯಕವಾದ ಚಿಂತನೆಗಳಿಂದ ಲಾಭವಿಲ್ಲ. ಎದೆಗುಂದದೆ ಪರಾಭವದ ಕಾರಣಗಳನ್ನು ವಿಶ್ಲೇಷಿಸಿ ಇರುಳಿನ ನಡುವೆ ಬೆಳಕು ಕಾಣುವಾತನೇ ಆಶಾವಾದಿ. ಸೋಲು ಗೆಲುವಿನ ಸೋಪಾನ ಎನ್ನುವುದು ಆತನ ಅಭಿಪ್ರಾಯ. ಬದುಕಿನಲ್ಲಿ ಸೋಲು, ನೋವುಗಳೆಂಬುದು ತಿರುವು ಮಾತ್ರ, ಅಂತ್ಯವಲ್ಲ ಎಂಬುದು ಅವನ ಅಭಿಮತ. ಕಡಲೂ ನಿನ್ನದೇ ಹಡಗೂ ನಿನ್ನದೇ ಮುಳುಗದಿರಲಿ ಬದುಕು ಎಂಬ ದೃಢ ವಿಚಾರ ಸರಣಿಗಳೊಂದಿಗೆ ಬಾಳುವ ವ್ಯಕ್ತಿ ಆತ. ಕುಗ್ಗದಿರು ಬಗ್ಗದಿರು
ಬದುಕಿನಲ್ಲಿ ಯಾವ ರೀತಿಯಲ್ಲಿ ಪೆಟ್ಟು ಬಿದ್ದರೂ ಕುಂದದೆ ಕುಗ್ಗದೆ ನಮಗಿಂತ ಆರ್ತರಾದವರ ಸ್ಥಿತಿ-ಗತಿಗಳನ್ನು ಜ್ಞಾಪಿಸಿಕೊಂಡು ಸಮಾಧಾನಿಗಳಾಗಬೇಕು. ಬ್ರಹ್ಮ ಬರೆದ ಬರಹವನ್ನು ಬಯ್ಯದೆ, ಬಂದ ಭಾಗ್ಯವನ್ನು ನೆನೆಸಿಕೊಂಡು ಆನಂದದಿಂದ ಬಾಳಬೇಕು. ”ನಡೆಮುಂದೆ ನಡೆಮುಂದೆ ನುಗ್ಗಿ ನಡೆಮುಂದೆ ಕುಗ್ಗದೆಯೇ ಬಗ್ಗದೆಯೇ ಹಿಗ್ಗಿ ನಡೆಮುಂದೆ” ಎಂಬ ಮಂತ್ರಘೋಷವನ್ನು ನಮ್ಮದಾಗಿಸಿಕೊಳ್ಳಬೇಕು. ಇಂತಹ ನಿಲುವನ್ನು ಹೊಂದಿರುವವರನ್ನು ಯಾರೂ ಕಾಡಿಸಲಾಗದು, ಪೀಡಿಸಲಾಗದು. ಪ್ರತಿಯೊಬ್ಬ ಜೀವಿ ಆಶಾವಾದವೆಂಬ ಆಯುಧವನ್ನು ಧರಿಸಿ ಸಮರ ಗೆಲ್ಲುವ ಸರದಾರನಂತೆ ಮೆರೆಯುವುದು ಅತಿ ಹಿತಕರ. ”ನಾಳೆ ನಿನಗೆ ಪಟ್ಟಾಭಿಷೇಕ” ಎಂದು ದಶರಥ ಹೇಳಿದಾಗ ಸದ್ಗುಣಧಾಮನಾದಂತಹ ಸೀತಾರಾಮ ಹಿಗ್ಗಲಿಲ್ಲ. ”ಇಂದೇ ನೀನು ವನವಾಸಕ್ಕೆ ಹೊರಡು” ಎಂದು ಕೈಕೇಯಿ ಹೇಳಿದಾಗ ಆತ ಕುಗ್ಗಲಿಲ್ಲ. ವಿಭಿನ್ನವಾದ ಸಂದರ್ಭ ಸಂಗತಿಗಳನ್ನು ಸಮಾನ ಮನಸ್ಕರಾಗಿ ಸ್ವೀಕರಿಸಬೇಕು ಎಂಬುದು ಇದರ ಮರ್ಮ. ದಿನನಿತ್ಯದ ಕಷ್ಟಗಳಿಂದ ಕುಗ್ಗದೆ, ಬಗ್ಗದೆ ಸಂತಸದಿಂದ ಬಾಳುತ್ತಾ ನಗೆ ಹಂಚುವ ಪ್ರಯತ್ನ ಮಾಡಬೇಕು. ಪುರುಷ ಪ್ರಯತ್ನದಿಂದ, ಕ್ರಿಯಾಶೀಲತೆಯಿಂದ, ಛಲದಿಂದ ನಿರಂತರ ಪ್ರಯತ್ನದಿಂದ ಆಶಾವಾದವೆಂಬ ನೀತಿಯನ್ನು ಪಾಲಿಸುತ್ತಾ ಸಾರ್ಥಕ ಬದುಕನ್ನು ಬದುಕಿ ತೋರಿಸಬಹುದು. ಒಟ್ಟಿನಲ್ಲಿ ಆಶಾವಾದ ಎಂಬುದು ಒಂದು ಮಾನಸಿಕ ಸ್ಥಿತಿ. ಇಂತಹ ತತ್ತ ಬದ್ಧವಾದ ಬಾಳಿಗೆ ಎಂದೆಂದಿಗೂ ಒಂದು ನೆಲೆಯಿದೆ, ಬೆಲೆಯಿದೆ. ಈ ಆಶಾವಾದದ ಸಿದ್ಧಾಂತಗಳ ನೆಲೆಗಟ್ಟಿನ ಮೇಲೆ ಮಾದರಿಯಾದ ಬದುಕನ್ನು ರೂಪಿಸಿಕೊಂಡು, ನಿರಶಾರಾಗದೆ ಜೀವಿಸುವವರು ಸದಾ ಸುಖೀಗಳು ಎಂಬುದು ಜಗದ ಸಕಲ ಪಂಡಿತರ ಅಭಿಪ್ರಾಯ. ಶಿವಾನಂದ ಪಂಡಿತ, ಗೋವಾ