ಉಡುಪಿ: ನಗರದಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಿಂದ ಆದಾಯಗಳಿಸುವ ನಿಟ್ಟಿನಲ್ಲಿ ನಗರಸಭೆ ಯೋಜನೆ ರೂಪಿಸಿದ್ದು, ವಿಂಡ್ರೊ ಕಂಪೋಸ್ಟ್ ಘಟಕ ನಿರ್ಮಾಣದ ಅಂತಿಮ ಘಟ್ಟದ ಕೆಲಸಗಳು ನಡೆಯುತ್ತಿವೆ. ತಿಂಗಳಾಂತ್ಯಕ್ಕೆ ಘಟಕದಲ್ಲಿ ಯಂತ್ರೋಪಕರಣ ಅಳವಡಿಕೆಯಾಗಲಿದೆ.
ಆಹಾರ ಪದಾರ್ಥ, ತರಕಾರಿ, ಮೀನು, ಮಾಂಸ ಇತ್ಯಾದಿಗಳ ತ್ಯಾಜ್ಯದಿಂದ ನಿತ್ಯ ಸರಾಸರಿ 35ರಿಂದ 38ಟನ್ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದನ್ನು ವ್ಯವಸ್ಥಿತವಾಗಿ ಗೊಬ್ಬರವಾಗಿಸುವ ಬಗ್ಗೆ ಅಧ್ಯಯನ ನಡೆಸಿ ವಿಂಡ್ರೊ ಕಾಂಪೋಸ್ಟ್ ಘಟಕ ನಿರ್ಮಾಣದ ಮೂಲಕ ಸಾವಯವ ಗೊಬ್ಬರ ಪಡೆಯುವ ಯೋಜನೆ ಇದು.
ಅಲೆವೂರು ಸಮೀಪದಲ್ಲಿರುವ ಕರ್ವಾಲು ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಹಸಿ ಕಸವನ್ನು ಒಂದೆಡೆ ಸುರಿದು ದಿಬ್ಬಗಳ ಮಾದರಿಯಲ್ಲಿ ವಿಂಗಡಿಸಲಾಗಿದೆ. ಹೆಚ್ಚು ಸಂಸ್ಕರಿತವಲ್ಲದ 150 ಟನ್ ಗೊಬ್ಬರವನ್ನು ಈಗಾಗಲೇ ಪ್ರಾಯೋಗಿಕವಾಗಿ ಉತ್ಪಾದಿಸಿ ರೈತರಿಗೆ ನೀಡಲಾಗಿದ್ದು, ಕೃಷಿಕರು ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
68 ಲ.ರೂ. ಮೌಲ್ಯದ ಯಂತ್ರೋಪಕರಣ ಘಟಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿರುವ ಅಳವಡಿಸಲಾಗುತ್ತಿದ್ದು, ಈ ಯಂತ್ರಗಳಿಗೆ 68 ಲ. ರೂ.ವೆಚ್ಚವಾಗಲಿದೆ. ಯಂತ್ರೋಪಕರಣ ಸಹಾಯದಿಂದ ಕಾಂಪೋಸ್ಟ್ ಆದ ಗೊಬ್ಬರವನ್ನು ಒಣಗಿಸಿ ಬಳಿಕ ಒಂದೇ ಒಂದು ಪ್ಲಾಸ್ಟಿಕ್‌ನ ಸಣ್ಣ ತುಂಡು ಗೊಬ್ಬರಕ್ಕೆ ಹೋಗದಂತೆ ಸಂಸ್ಕರಿಸಲಾಗುತ್ತದೆ. 36 ಎಂಎಂ, 16 ಎಂಎಂ, 4 ಎಂಎಂನಲ್ಲಿ ಸಂಸ್ಕರಿಸಿ, ಪುಡಿಯಾಗಿಸುವ ಯಂತ್ರಗಳನ್ನು ಘಟಕದಲ್ಲಿ ಅಳವಡಿಸಲಾಗುತ್ತದೆ. ಅನಂತರ ಗೊಬ್ಬರದ ಪುಡಿಯನ್ನು ಬ್ಯಾಗ್‌ನಲ್ಲಿ ತುಂಬಿ ಉತ್ತಮ ದರದಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ನಡೆಯಲಿದೆ. ವಿಂಡ್ರೊ ಕಾಂಪೋಸ್ಟ್‌ನ ಪ್ರಾಯೋಗಿಕ ಗೊಬ್ಬರದ ಮಾದರಿಯನ್ನು ಬೆಂಗಳೂರಿನ ತೋಟಗಾರಿಕೆ ಇಲಾಖೆ ಬಯೋಸೆಂಟರ್ ತಜ್ಞರು ಪರಿಶೀಲಿಸಿ ಅನುಮೋದನೆಯನ್ನು ನೀಡಿದ್ದಾರೆ.
ಫೆಬ್ರವರಿ ತಿಂಗಳಾಂತ್ಯದೊಳಗೆ ಕಾರ್ಯಾರಂಭ
ಉಡುಪಿ ನಗರಸಭೆ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಮಾದರಿಯಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಮಾರ್ಪಡಿಸಿ ಅದರಿಂದ ಆದಾಯ ಪಡೆಯುವ ನಿಟ್ಟಿನಲ್ಲಿ ವಿಂಡ್ರೋ ಕಂಪೋಸ್ಟ್ ಘಟಕ ನಿರ್ಮಿಸಲಾಗುತ್ತಿದೆ. ಫೆಬ್ರವರಿ ತಿಂಗಳಾಂತ್ಯದೊಳಗೆ ಕಾರ್ಯಾರಂಭ ಮಾಡಲಿವೆ.
– ಸುಮಿತ್ರಾ ಎಸ್. ನಾಯಕ್, ಅಧ್ಯಕ್ಷರು. ಉಡುಪಿ ನಗರಸಭೆ