Advertisement

ಗಂಗಾವತಿ ನಗರಸಭೆ ಆದಾಯ ಕುಸಿತ

03:09 PM Dec 03, 2020 | Suhan S |

ಗಂಗಾವತಿ: ನಗರಸಭೆ ವ್ಯಾಪ್ತಿಯಲ್ಲಿ ಸ್ವಂತ ಆದಾಯ ಕ್ರೋಡೀಕರಿಸಿಕೊಳ್ಳುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ವಾರ್ಷಿಕ ಆದಾಯ ಶೇ. 38ಕ್ಕೆ ಕುಸಿತ ಕಂಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ತೊಂದರೆ ಎದುರಾಗಿದೆ.

Advertisement

ಪ್ರತಿ ಮಾಸಿಕ ಸಭೆಯಲ್ಲಿ ಜಿಲ್ಲಾಧಿಕಾರಿಗಳು ತೆರಿಗೆ ವಾಣಿಜ್ಯ ಸಂಕೀರ್ಣಗಳ ಬಾಡಿಗೆ ವಸೂಲಿ ಮಾಡಲು ಸೂಚನೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ನಗರದಲ್ಲಿ 27 ಸಾವಿರ ಆಸ್ತಿಗಳು ನಗರಸಭೆಯಲ್ಲಿದಾಖಲಾಗಿದ್ದು, ವಾರ್ಷಿಕ 2 ಕೋಟಿ ರೂ. ತೆರಿಗೆ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ, ಶಾಪಿಂಗ್‌ ಕಾಂಪ್ಲೆಕ್ಸ್‌ ವಾಣಿಜ್ಯ ತೆರಿಗೆ ಮತ್ತು ಜಾಹೀರಾತು ಫಲಕಗಳಿಂದ ಬರುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ಮಾಲೀಕರು ತೆರಿಗೆ ಪಾವತಿಸದೇ ನಿರ್ಲಕ್ಷ್ಯ ತೋರುತ್ತಿರುವುದರಿಂದ ನಗರಸಭೆ ಹಣಕಾಸಿನ ಸ್ಥಿತಿ ಶೋಚನೀಯವಾಗಿದೆ.

ಖಾಸಗಿ ಶಾಲಾ-ಕಾಲೇಜುಗಳು ಮತ್ತು ಸುಮಾರು 3200ಕ್ಕೂ ಹೆಚ್ಚು ಶಾಪಿಂಗ್‌ ಕಾಂಪ್ಲೆಕ್ಸ್‌ಗಳಿವೆ ವಾರ್ಷಿಕ 50-60 ಲಕ್ಷ ರೂ. ತೆರಿಗೆ ಇವುಗಳಿಂದ ನಗರಸಭೆ ಬರಬೇಕಿದ್ದು, ಕಂದಾಯ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ ಜನಪ್ರತಿನಿಧಿಗಳ ಮಧ್ಯೆ ಪ್ರವೇಶದಿಂದ ನಗರಸಭೆಗೆ ಬರಬೇಕಿದ್ದ ಆದಾಯ ನಿಲುಗಡೆಯಾಗಿದೆ. ನಗರದ ರಸ್ತೆ ಮಧ್ಯೆ ಮತ್ತು ಅಲ್ಲಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳಿಗೆ ಅವೈಜ್ಞಾನಿಕವಾಗಿ ನೀಡಿರುವ ಪರವಾನಗಿಯಿಂದಲೂ ಆದಾಯ ಸೋರಿಕೆಯಾಗುತ್ತಿದೆ.

ನಗರದ ವಿವಿಧೆಡೆ ಫ್ಲೆಕ್ಸ್‌ ಅಳವಡಿಸಲು ಕಳೆದ 10 ವರ್ಷಗಳಿಂದ ಖಾಸಗಿಯವರು ಬೋರ್ಡ್‌ಗಳನ್ನು ಅಳವಡಿಸಿ ಜಾಹೀರಾತು ಹಾಕುತ್ತಿದ್ದು, ನಿರ್ದಿಷ್ಟ ಆದಾಯ ಬರುತ್ತಿಲ್ಲ. ಇತ್ತೀಚೆಗೆ ಜಾಹೀರಾತು ಬೋರ್ಡ್‌ಗೆ ಕಂದಾಯ ನೈರ್ಮಲ್ಯ ವಿಭಾಗದವರು ಪರವಾನಗಿ ನೀಡಿದ್ದು ಪಾರದರ್ಶಕವಾಗಿಲ್ಲ. ಇದರಿಂದ ನಗರಸಭೆ ಆದಾಯ ಸೋರಿಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಅಭಿವೃದ್ಧಿಗೆ ಹಣಕಾಸಿನ ಕೊರತೆ: ನಗರದ ಸ್ವಚ್ಛತೆ ಶೌಚಾಲಯ, ಉದ್ಯಾನವನ ನಿರ್ವಹಣೆ ಸೇರಿದಂತೆ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯ ನಡೆಸಲು ನಗರಸಭೆಗೆ ಸ್ವಂತ ಸಂಪನ್ಮೂಲದ ಕೊರತೆ ಕಾಡುತ್ತಿದೆ. ನಗರಸಭೆಯ ದಿನಗೂಲಿ ಪೌರಕಾರ್ಮಿಕರವೇತನ ಪಾವತಿಸಲು ಕೆಲವೊಮ್ಮೆ ಹಣದ ಕೊರತೆ ಎದುರಾಗುತ್ತಿದೆ. ಕಂದಾಯ ವಿಭಾಗದ ಅಧಿಕಾರಿಗಳು ತೆರಿಗೆ ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ರಾಜ್ಯದಲ್ಲೇ ಗಂಗಾವತಿ ನಗರಸಭೆ ಸಂಪನ್ಮೂಲ ಸಂಗ್ರಹಣೆಯಲ್ಲಿ ಪ್ರಥಮವಾಗಲಿದೆ. ನಗರದ ಕೆಲಶ್ರೀಮಂತರು ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಗೋಲ್‌ಮಾಲ್‌ ಮಾಡಿ ಅತ್ಯಂತ ಕಡಿಮೆ ತೆರಿಗೆ ಪಾವತಿ ಮಾಡಿದ್ದು, ಇದಕ್ಕೆ ನಗರಸಭೆ ಕೆಲ ಅಧಿಕಾರಿಗಳ ಕುಮ್ಮಕ್ಕಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ನಗರಸಭೆಯಲ್ಲಿ ಸಾರ್ವಜನಿಕರು ಫಾರಂ-03 ಮತ್ತು ಮುಟೇಶನ್‌ ಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಕಾಯುತ್ತಿದ್ದು, ನಗರಸಭೆ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಕೆಲಸ ಕಾರ್ಯ ಮಾಡಿದರೆ ತೆರಿಗೆ ಸೇರಿ ನಗರಸಭೆಯ ವಿವಿಧ ಶುಲ್ಕಗಳ ಆದಾಯ ಹೆಚ್ಚಳವಾಗಲಿದೆ. ಇದರಿಂದ ನಗರಸಭೆ ವಿವಿಧ ಅಭಿವೃದ್ಧಿ ಕಾರ್ಯಗಳು ನಿರಾತಂಕವಾಗಿ ನಡೆಯಲು ಸಾಧ್ಯವಾಗುತ್ತದೆ.

ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿರುವ ನಗರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ, ನಳದ ತೆರಿಗೆ, ಆಸ್ತಿ ತೆರಿಗೆ ಹೀಗೆ ತೆರಿಗೆ ಬಾಕಿ ಉಳಿಸಿಕೊಂಡವರ ಸಂಖ್ಯೆ ಹೆಚ್ಚಾಗಿದ್ದು, ನಗರಸಭೆಯಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ರೈಸ್‌ ಮಿಲ್‌, ಕಲ್ಯಾಣ ಮಂಟಪ, ಟ್ರೇಡ್‌ ಪರವಾನಗಿ, ಶಾಪಿಂಗ್‌ ಕಾಂಪ್ಲೆಕ್ಸ್‌, ಸಿನಿಮಾ ಮಂದಿರ, ಖಾಸಗಿ ಶಾಲಾ-ಕಾಲೇಜುಗಳ ಜಾಗದ ತೆರಿಗೆ ಬಾಕಿ ಗಣನೀಯವಾಗಿ ಹೆಚ್ಚಾಗಿದೆ. ಕೆಲ ಶ್ರೀಮಂತರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆ ತೆರಿಗೆ, ಮಳಿಗೆ ಬಾಡಿಗೆ ಸೇರಿ ನಗರಸಭೆಗೆ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಮಾಡಿ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕೋವಿಡ್ ಮಹಾಮಾರಿಯ ಮಧ್ಯೆದಲ್ಲೂ ಚೆನ್ನಾಗಿ ಆದಾಯವಿರುವ ವಾಣಿಜ್ಯ ಸಂಕೀರ್ಣಗಳಿಂದ ತೆರಿಗೆ ವಸೂಲಿ ಮಾಡಲಾಗುತ್ತದೆ. ನಗರದಲ್ಲಿ ವಾಣಿಜ್ಯ ವಹಿವಾಟು ಮಾಡುವ ಪ್ರತಿಯೊಬ್ಬರು ಟ್ರೇಡ್‌ ಲೈಸೆನ್ಸ್‌ ಕಡ್ಡಾಯವಾಗಿ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. –ಅರವಿಂದ ಜಮಖಂಡಿ, ಪೌರಾಯುಕ್ತರು.

 

ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next