ಮಹಾನಗರ: ನೇತ್ರಾವತಿ ಸಂರಕ್ಷಣಾ ಸಮಿತಿಯ ಸಂಚಾಲಕ, ಕಾಂಗ್ರೆಸ್‌ನ ಶಶಿರಾಜ್ ಶೆಟ್ಟಿ ಕೊಳಂಬೆ ಸಹಿತ ಸುಮಾರು 125 ಮಂದಿ ಗುರುವಾರ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಉತ್ತರ ಪ್ರದೇಶದ ಗ್ರಾಮೀಣ ಅಭಿವೃದ್ಧಿ ಸಚಿವ ಡಾ| ಮಹೇಂದ್ರ ಸಿಂಗ್ ಅವರು ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸಲಾರಂಭಿಸಿದೆ. ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತ ಹಲವು ಮಂದಿ ಬಿಜೆಪಿಯನ್ನು ಸೇರಿಕೊಳ್ಳುತ್ತಿದ್ದಾರೆ. ಬರುವ ಪ್ರತಿಯೊಬ್ಬರನ್ನು ಬಿಜೆಪಿ ಪ್ರೀತ್ಯಾಧಾರಗಳಿಂದ ನೋಡಿಕೊಳ್ಳಲಿದೆ ಎಂದರು.
ಬಂಟ್ವಾಳದಲ್ಲಿ ರಮಾನಾಥ ರೈ ಅವರು, ತಾನು ಬೆಳೆದದ್ದು ಬಿಟ್ಟರೆ ಬೇರೊಬ್ಬ ನಾಯಕನನ್ನು ಬೆಳೆಸಿಲ್ಲ. ಅಲ್ಪಸಂಖ್ಯಾಕರ ಪರ ವಹಿಸಿ ಮಾತನಾಡುವ ಅವರು ಆ ಸಮುದಾಯಕ್ಕೆ ಏನನ್ನೂ ಮಾಡಿಲ್ಲ. ಅಲ್ಪಸಂಖ್ಯಾಕ ನಾಯಕರನ್ನೂ ಬೆಳೆಸಲು ಸಾಧ್ಯವಾಗಿಲ್ಲ. ಇದರಿಂದ ಬೇಸತ್ತ ಅಲ್ಪ ಸಂಖ್ಯಾಕ ಮಂದಿ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಯತ್ತ ಬರುತ್ತಿದ್ದಾರೆ ಎಂದರು.
ಪುನರ್ ಪರಿಶೀಲಿಸುವ ವಿಶ್ವಾಸ
ಶಶಿರಾಜ್ ಶೆಟ್ಟಿ ಕೊಳಂಬೆ ಮಾತನಾಡಿ, ಕಾಂಗ್ರೆಸ್‌ನ ಸ್ವಜನ ಪಕ್ಷಪಾತಕ್ಕೆ ಬೇಸತ್ತು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ದೇಶ ಪ್ರೇಮ, ಧರ್ಮಪ್ರೇಮ ಹೊಂದಿರುವ ಬಿಜೆಪಿಯೊಂದಿಗೆ ಕೆಲಸ ಮಾಡುವುದರೊಂದಿಗೆ ಕಾಂಗ್ರೆಸ್ ಮುಕ್ತ ದಕ್ಷಿಣ ಕನ್ನಡ ಜಿಲ್ಲೆಗಾಗಿ ನಾನು ಪಣತೊಡುತ್ತಿದ್ದೇನೆ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದಲ್ಲಿ ಎತ್ತಿನಹೊಳೆ ಯೋಜನೆಯನ್ನು ಪುನರ್ ಪರಿಶೀಲಿಸುವ ವಿಶ್ವಾಸವಿದೆ ಎಂದರು.
ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡರಾದ ರುಕ್ಮಯ ಪೂಜಾರಿ, ಸುಲೋಚನಾ ಜಿ.ಕೆ. ಭಟ್, ಹರಿಕೃಷ್ಣ ಬಂಟ್ವಾಳ್, ರವಿಶಂಕರ ಮಿಜಾರು, ಸುದರ್ಶನ ಮೂಡುಬಿದಿರೆ ಮುಂತಾದವರು ಉಪಸ್ಥಿತರಿದ್ದರು.