Advertisement

ಕರ್ಫ್ಯೂ ಹೇರಿದರೂ ನಿಲ್ಲದ ಪ್ರತಿಭಟನೆ

12:30 AM Feb 16, 2019 | Team Udayavani |

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಅವಂತಿಪೊರಾದಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಹತ್ಯೆ ಮಾಡಿರುವುದನ್ನು ಖಂಡಿಸಿ ಜಮ್ಮುವಿನಲ್ಲಿ ಶುಕ್ರವಾರ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಅಲ್ಲಲ್ಲಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯಗಳು ನಡೆದಿವೆ. ಗುರುವಾರದಿಂದಲೇ ಕಣಿವೆ ರಾಜ್ಯದಲ್ಲಿ ಇಂಟರ್‌ನೆಟ್‌ ಸೇವೆ ರದ್ದು ಮಾಡಲಾಗಿದೆ. ಜಮ್ಮು ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ತಹಬದಿಗೆ ತರಲು ಸೇನೆ ಧ್ವಜಪಥ ಸಂಚಲನ ನಡೆಸಿದೆ.

Advertisement

ಜಮ್ಮು ನಗರದ ರೆಸಿಡೆನ್ಸಿ ರಸ್ತೆ, ಕಚಿ ಚವಾನಿ ಮತ್ತು ದೋಗ್ರಾ ಹಾಲ್‌ ಪ್ರದೇಶಗಳಲ್ಲಿ ಕರ್ಫ್ಯೂ ಹೇರಿದ್ದನ್ನು ಲೆಕ್ಕಿಸದೆ ರ್ಯಾಲಿಗಳನ್ನು ನಡೆಸಿದ್ದಾರೆ. ಗುಜ್ಜರ್‌ ನಗರ ಎಂಬ ಪ್ರದೇಶದಲ್ಲಿ ಐದು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪಾರ್ಕ್‌ ಮಾಡಲಾಗಿರುವ ವಾಹನಗಳನ್ನು ಕಿಡಿಗೇಡಿಗಳು ಮಗುಚಿ ಹಾಕಿದ್ದಾರೆ. 

ಪರಿಸ್ಥಿತಿ ಕೈಮೀರಿ ಎರಡು ಕೋಮುಗಳ ನಡುವೆ ಗಲಭೆ ಉಂಟಾಗಬಹುದು ಎಂಬ ಕಾರಣದಿಂದ ಕರ್ಫ್ಯೂ ಹೇರಲು ನಿರ್ಧರಿಸಲಾಯಿತು ಎಂದು ವಿಭಾಗೀಯ ಆಯುಕ್ತ ಸಂಜಯ ವರ್ಮಾ ಹೇಳಿದ್ದಾರೆ. ಜತೆಗೆ ಹೆಚ್ಚಿನ ಭದ್ರತೆಗಾಗಿ ಸೇನೆಯನ್ನು ಕರೆಯಿಸಿಕೊಳ್ಳಲು ನಿರ್ಧರಿಸಲಾಯಿತು.

ಗುಜ್ಜರ್‌ ನಗರ ಮತ್ತು ಕೆಲ ಪ್ರದೇಶಗಳಲ್ಲಿ ಮನೆಗಳ ಛಾವಣಿಯಲ್ಲಿ ನಿಂತುಕೊಂಡು ಇಟ್ಟಿಗೆ, ಕಲ್ಲುಗಳನ್ನು ಎಸೆಯುತ್ತಿದ್ದರು. ಅವರನ್ನು ನಿಯಂತ್ರಿಸಲು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ನಿಯಂತ್ರಣಕ್ಕೆ ತರಲಾಯಿತು. ಅದಕ್ಕೂ ಬಗ್ಗದೇ ಇದ್ದಾಗ ಜಲಫಿರಂಗಿ ಪ್ರಯೋಗ ನಡೆಸಲಾಯಿತು. 

ಜ್ಯುವೆಲ್‌ ಚೌಕ್‌, ಪುರಾನಿ ಮಂಡಿ, ರೆಹಾರಿ, ಶಕ್ತಿನಗರ, ಪಕ್ಕಾದಂಗಾ, ಜಾನಿಪುರ್‌, ಗಾಂಧಿನಗರ, ಬಕ್ಷಿನಗರ, ಮುತಿ, ತಲಾಲ್‌ ತಿಲ್ಲೂ ಮತ್ತು ಸತ್ವಾರಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪಾಕಿಸ್ಥಾನ ವಿರೋಧಿ ಘೋಷಣೆ ಕೂಗಿ, ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಬಜರಂಗದಳ, ಶಿವಸೇನೆ, ದೋಗ್ರಾ ಫ್ರಂಟ್‌ ಸೇರಿದಂತೆ ಹಲವು ಸಂಘಟನೆಗಳು ಮೊಂಬತ್ತಿ ಹಚ್ಚಿ ಹುತಾತ್ಮರಿಗೆ ಗೌರವ ಸಲ್ಲಿಸಿದವು. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಬಾರ್‌ ಎಸೋಸಿಯೇಶನ್‌ ಎಲ್ಲಾ ಕೋರ್ಟ್‌ಗಳಲ್ಲಿ ಕಾರ್ಯಕಲಾಪ ಸ್ಥಗಿತಗೊಳಿಸಿದ್ದವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next