ನವದೆಹಲಿ: ಸಾವು ಹೇಗೆ ಬೇಕಾದರೂ ಬರಬಹುದು. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕೈಗಳನ್ನು ಅಥವಾ ತಲೆಯನ್ನು ಕಿಟಕಿಯಿಂದ ಹೊರಗಡೆ ಹಾಕಬಾರದು ಎಂದು ನಿಯಮವಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ನಮ್ಮ ಪ್ರಾಣಕ್ಕೆ ಸಂಚಕಾರ ಬರಬಹುದು. ಇಲ್ಲೊಂದು ಅಂತಹ ಘಟನೆ ಬೆಳಕಿಗೆ ಬಂದಿದ್ದು, ಬಸ್ಸಿನಲ್ಲಿ ತೆರಳುವಾಗ ವಾಂತಿ ಮಾಡಲೆಂದು ಬಸ್ಸಿನ ಕಿಟಕಿಯಿಂದ ತಲೆ ಹೊರಹಾಕಿದ ಸಮಯದಲ್ಲಿ ಎದುರಿನಿಂದ ಬಂದ ಲಾರಿ ತಲೆಗೆ ತಾಗಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಮಧ್ಯ ಪ್ರದೇಶದ ಖಾಡ್ವಾ ದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು 11 ವರ್ಷದ ತಮನ್ನ ಎಂದು ಗುರುತಿಸಲಾಗಿದ್ದು, ಈಕೆ ತನ್ನ ಪೋಷಕರೊಂದಿಗೆ ಮದುವೆ ಕಾರ್ಯಕ್ರಮಕ್ಕೆಂದು ಬಸ್ಸಿನಲ್ಲಿ ತೆರಳುತ್ತಿದ್ದಳು ಎನ್ನಲಾಗಿದೆ.
ಬಸ್ ಖಾಡ್ವಾ- ಇಂದೋರ್ ಹೈವೆಯಿಂದ ಕಿರು ರಸ್ತೆಗೆ ತಿರುಗಿದ್ದು ಇನ್ನೇನು ಕೆಲವೇ ಕೆಲವು ಕಿ. ಮೀ ದೂರ ಪ್ರಯಾಣ ಬಾಕಿ ಇರುವಾಗಲೇ ಬಾಲಕಿಗೆ ವಾಂತಿ ಬಂದಿದ್ದು, ಬಾಲಕಿ ವಾಂತಿ ಮಾಡಲೆಂದು ಬಸ್ಸಿನ ಕಿಟಕಿಯಿಂದ ತಲೆಯನ್ನು ಹೊರಗಡೆ ಹಾಕಿದ್ದಾಳೆ. ಆದರೆ ದುರಾದೃಷ್ಟವಶಾತ್ ಅದೇ ಸಮಯದಲ್ಲಿ ಎದುರಿನಿಂದ ಬಂದ ಲಾರಿಯು ಬಾಲಕಿಯ ತಲೆಗೆ ತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳ : ನಾನು ‘ಶಾಂಡಿಲ್ಯ’ ಗೋತ್ರದವಳು… : ಮಮತಾ ಬ್ಯಾನರ್ಜಿ
ಲಾರಿ ತಮನ್ನಳ ತಲೆಯ ಭಾಗಕ್ಕೆ ತಾಗಿದ ರಭಸಕ್ಕೆ ಆಕೆಯ ತಲೆ ದೇಹದಿಂದ ಬೇರ್ಪಟ್ಟಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು. ಇದೀಗ ಘಟನೆಯ ಕುರಿತಾಗಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಲಾರಿ ಚಾಲಕನನ್ನು ಹುಡುಕಲು ಬಲೆ ಬೀಸಿದ್ದಾರೆ.