ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣ ಪಕ್ಕಾ ಬಾಲಿವುಡ್ ಸಿನೆಮಾ ಶೈಲಿಯಲ್ಲಿ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಪ್ರಕರಣದ ತನಿಖೆ ಯನ್ನು ಕೇಂದ್ರ ಸರಕಾರವು ಎನ್ ಐಎಗೆ ವಹಿಸಿದ ಬಳಿಕ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಸಚಿನ್ ವಾಜೆ ಅವರು ಪ್ರಕರಣದಲ್ಲಿ ಶಾಮೀ ಲಾಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಾಜೆ ಅವರನ್ನು ಬಂಧಿಸಿದ ಬಳಿಕ ಇಡೀ ಪ್ರಕರಣ ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವಿನ ಅಪವಿತ್ರ ನಂಟಿನ ಒಂದೊಂದೇ ಎಳೆಯನ್ನು ಬಿಚ್ಚಿಡುತ್ತಿದೆ.
ಸಚಿನ್ ವಾಜೆ ಅವರ ಬಂಧನವಾಗುತ್ತಿದ್ದಂತೆಯೇ ಮುಂಬಯಿ ಪೊಲೀಸ್ ಆಯುಕ್ತರಾಗಿದ್ದ ಪರಂಬೀರ್ ಸಿಂಗ್ ಅವರನ್ನು ಅಲ್ಲಿನ ಸರಕಾರ ಎತ್ತಂಗಡಿ ಮಾಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪರಂ ಬೀರ್ ಸಿಂಗ್ ಅವರು ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬಹಿ ರಂಗ ಪತ್ರ ಬರೆದು ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಪ್ರತೀ ತಿಂಗಳೂ 100 ಕೋ. ರೂ. ಸಂಗ್ರಹಿಸಿ ನೀಡುವಂತೆ ಸಚಿನ್ ವಾಜೆಗೆ ಸೂಚಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಶಿವಸೇನೆ ನೇತೃತ್ವದ ಮೈತ್ರಿ ಸರಕಾರಕ್ಕೆ ತೀವ್ರ ಮುಜು ಗರ ವನ್ನುಂಟು ಮಾಡಿದೆ. ಈ ಆರೋಪ ವನ್ನು ಅನಿಲ್ ದೇಶ್‌ಮುಖ್ ಅವರು ತಳ್ಳಿಹಾಕಿರುವರಾದರೂ ಇದು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ನಂಟಿನ ಕುರಿತಾದ ಚರ್ಚೆಯನ್ನು ಮತ್ತೂಮ್ಮೆ ಮುನ್ನೆಲೆಗೆ ತಂದಿದೆ.
ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬಯಿಯಲ್ಲಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಭೂಗತ ಪಾತಕಿಗಳ ನಡುವಣ ಸಂಬಂಧ ಹೊಸದೇನಲ್ಲ. ಮೂರು ದಶಕಗಳಷ್ಟು ಹಿಂದೆ ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿದ್ದ ಭೂಗತ ಪಾತಕಿಗಳ ಕೊಲೆ, ಸುಲಿಗೆ, ದರೋಡೆಯಂಥ ಕೃತ್ಯಗಳಿಗೆ “ಎನ್‌ಕೌಂಟರ್’ ಅಸ್ತ್ರ ಬಳಸಿ ಅವರ ಹುಟ್ಟಡಗಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಕೆಚ್ಚೆದೆ, ಶೌರ್ಯ, ಸಾಹಸಗಳ ಬಗೆಗೆ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಕಾಲಕ್ರಮೇಣ ಕೆಲವರ ಕಾರ್ಯವೈಖರಿ ಮತ್ತು ನಡೆಗಳ ಬಗೆಗೆ ಅನುಮಾನಗಳು ಹುಟ್ಟಿಕೊಂಡಿದ್ದವಲ್ಲದೆ ಇದಕ್ಕಾಗಿ ಅವರು ತನಿಖೆ ಎದುರಿಸಬೇಕಾಗಿ ಬಂದಿತ್ತು. ಇಂಥ ಬಹುತೇಕ ಪ್ರಕರಣಗಳಲ್ಲಿ ಈ ಪೊಲೀಸ್ ಅಧಿಕಾರಿಗಳಿಗೆ ಒಂದಲ್ಲ ಒಂದು ರಾಜಕೀಯ ಪಕ್ಷದ ನಾಯಕರ ಕೃಪಾಶೀರ್ವಾದ ಇತ್ತು ಎಂಬುದು ರಹಸ್ಯವೇನಲ್ಲ. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳದೂ “ಎಲ್ಲರ ಮನೆಯ ದೋಸೆ, ಅಲ್ಲ ಕಾವಲಿಯೇ ತೂತು’ ಎಂಬುದಂತೂ ದಿಟ.
ಈಗಾಗಲೇ ಮಹಾರಾಷ್ಟ್ರದಲ್ಲಿ ಈ ಪ್ರಕರಣ ರಾಜಕೀಯವಾಗಿ ಭಾರೀ ಆರೋಪ -ಪ್ರತ್ಯಾರೋಪಗಳ ವಿನಿಮಯಕ್ಕೆ ಕಾರಣವಾಗಿದ್ದು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟ ಆರಂಭಿಸಿದ್ದಾರೆ. ಆದರೆ ಇಲ್ಲಿ ನಿಜವಾಗಿ ಚರ್ಚೆ ಅಥವಾ ಚಿಂತನೆ ನಡೆಯಬೇಕಿರುವುದು ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವಿನ ನಂಟಿನ ವಿಚಾರದ ಬಗೆಗೆ. ಈ ವಿಷಯವನ್ನು ರಾಜಕೀಯ ನೆಲೆಯಿಂದ ಹೊರತಾಗಿ ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯ. ಪ್ರಕರಣವನ್ನು ಯಾವುದೋ ತನಿಖಾ ಸಂಸ್ಥೆಗಳ ಬದಲಾಗಿ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂ ರ್ತಿ ಗ ಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವುದು ಹೆಚ್ಚು ಸೂಕ್ತ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇಂಥ ಕೃತ್ಯಗಳಿಗೆ ಪ್ರಚೋದನೆ ನೀಡುವ ರಾಜಕೀಯ ನಾಯಕರು, ಅಧಿಕಾರಿಗಳಿಗೆ ಕಡಿವಾಣ ಹಾಕಲು ಇದು ಸುಸಮಯ.