ನವದೆಹಲಿ: ಕೃಷಿ ಕಾಯಿದೆಯ ಕುರಿತಾದ ಹೋರಾಟ ದಿನೇ ದಿನೇ ಹೊಸ ಹೊಸ ರೂಪವನ್ನು ಪಡೆಯುತ್ತಿರುವ ಬೆನ್ನಲ್ಲೇ, ಈ ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್ ಮೂಲದ 61 ವರ್ಷದ ರೈತನೊಬ್ಬ ಹರಿಯಾಣದ ಜಜ್ಜರ್ ಪ್ರದೇಶದಲ್ಲಿರುವ ಬಸ್ ಸ್ಟ್ಯಾಂಡ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ಮೃತ ವ್ಯಕ್ತಿಯನ್ನು ಹಕಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ಟಿಕ್ರಿ ಗಡಿಯಲ್ಲಿನ ರೈತ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು ಜಜ್ಜರ್ ಪ್ರದೇಶದ ಬಸ್ ಸ್ಟ್ಯಾಂಡ್ ನ ಹಿಂಭಾಗದಲ್ಲಿ ಕತ್ತು ಸೀಳಿರುವ ಸ್ಥಿತಿಯಲ್ಲಿ ಈ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈತನ ಸಾವಿನ ಕಾರಣದ ಹಿನ್ನೆಲೆ ಏನೆಂಬುದು ಈವರೆಗೂ ತಿಳಿದುಬಂದಿಲ್ಲ. ಹರಿತವಾಗಿರುವ ಆಯುಧದಿಂದ ಈತನ ಕುತ್ತಿಗೆ ಸೀಳಲಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಶಹಪುರ ಟೋಲ್ ಗೇಟ್ ನಲ್ಲಿ ಎಇಇ ಮೇಲೆ ತೀವ್ರ ಹಲ್ಲೆ: ಎಂಟು ಜನರ ಬಂಧನ
ಈ ಕುರಿತಾಗಿ ಘಟನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ತನಿಖೆಯನ್ನು ಆರಂಭಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ FIR ದಾಖಲಿಸಲಾಗಿದೆ ಎಂದಿರುವ ಅಧಿಕಾರಿಗಳು, ಈ ಘಟನೆ ನಡೆಯುವುದಕ್ಕಿಂತ ಮೊದಲು ಈತ ಯಾರೊಡನೆಯಾದರೂ ಗಲಾಟೆ ಮಾಡಿಕೊಂಡಿದ್ದನೇ ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಸದ್ಯ ಈ ವ್ಯಕ್ತಿ ಶವವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿರುವ ಮುಸ್ಲಿಮರು ಒಟ್ಟಾದರೆ ನಾಲ್ಕು ಪಾಕ್ ಸೃಷ್ಟಿ: ಟಿಎಂಸಿ ಮುಖಂಡ ಶೇಖ್