ದಾಂಡೇಲಿ : ಗಾಯಗೊಂಡು ಹುಳವಾಗಿ ಜೀವನ್ಮರಣ ಹೋರಾಟದಲ್ಲಿದ್ದ ಗೋವೊಂದನ್ನು ನಗರದ ಗೋ ರಕ್ಷಕರು ರಕ್ಷಿಸಿ, ಆರೈಕೆ ಮಾಡಿದ ಮಾನವೀಯ ಕಾರ್ಯ ನಗರದ ಸಾಯಿನಗರದಲ್ಲಿ ನಡೆದಿದೆ.
ಇದನ್ನೂ ಓದಿ:ಕಾಲುಗಳು ಇಲ್ಲದಿದ್ದರೆ ಏನಂತೆ ?ಪ್ಯಾರಾಲಿಂಪಿಕ್ ನಲ್ಲಿ ಚಿನ್ನ ಗೆದ್ದ ಅವನಿ ಯಶಸ್ಸಿನ ಪಯಣ
ನಗರದ ಸಾಯಿನಗರದಲ್ಲಿ ಬಿಡಾಡಿ ಗೋವೊಂದು ಗಾಯಗೊಂಡು ಹುಳವಾಗಿ ಜೀವನ್ಮರಣ ಹೋರಾಟದಲ್ಲಿ ಒದ್ದಾಡುತ್ತಿತ್ತು. ಗಾಯವಾದ ಕಡೆಯಿಂದ ನಿರಂತರವಾಗಿ ರಕ್ತ ಸುರಿಯಲಾರಂಭಿಸಿ ನಿತ್ರಾಣವಾಗಿ ಬಸವಳಿದಿತ್ತು. ವಿಚಾರ ತಿಳಿದು ತಕ್ಷಣವೆ ಸ್ಥಳಕ್ಕಾಗಮಿಸಿದ ನಗರದ ಗೋರಕ್ಷಕರುಗಳಾದ ಗೋಪಾಲ ಜಾಧವ್, ಭೀಮುಶಿ ಬಾದುಲಿ, ವಿನೋದ್ ಶರ್ಮಾ, ರವೀಂದ್ರ ಇವರುಗಳು ತಕ್ಷಣವೇ ಗಾಯವಾಗಿದ್ದ ಗೋವನ್ನು ಆರೈಕೆ ಮಾಡಿ, ನಗರದ ಪಶುವೈದ್ಯ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿ ಸಂದೀಪ ಅವರು ಗಾಯಗೊಂಡಿದ್ದ ಗೋವಿಗೆ ಸೂಕ್ತ ರೀತಿಯ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡಿದರು. ನಗರದಲ್ಲಿ ಗೋವುಗಳಿಗೆ ತೊಂದರೆಯಾದಾಗ ತಡಮಾಡದೆ ಧಾವಿಸಿ ಚಿಕಿತ್ಸೆ ನೀಡುತ್ತಿರುವ ಸಂದೀಪ ಅವರ ಬಗ್ಗೆ ನಗರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ನಗರದಲ್ಲಿ ಬಿಡಾಡಿ ದನ ಕರುಗಳು ಆರೋಗ್ಯಬಾಧೆಯನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ತಕ್ಷಣವೆ ಧಾವಿಸಿ, ಅವುಗಳನ್ನು ಉಪಚರಿಸುವ ಗೋ ಸಂರಕ್ಷಕರ ಮಾನವೀಯ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳಲೆಬೇಕು.
ಈ ಭಾಗದಲ್ಲಿ ಬಿಡಾಡಿ ದನ ಕರುಗಳ ಸಂಖ್ಯೆಯೂ ಬಹಳಷ್ಟಿರುವುದಲ್ಲದೇ, ಇತ್ತೀಚಿನ ಕೆಲ ವರ್ಷಗಳಿಂದ ವನ್ಯಪ್ರಾಣಿಗಳಾದ ಜಿಂಕೆಗಳು ನಗರ ಪ್ರದೇಶಕ್ಕೆ ಆಹಾರವನ್ನರಸಿ ಬರುತ್ತಿರುವುದರಿಂದ ಅನೇಕ ಬಾರಿ ಜಿಂಕೆಗಳು ಬಿಡಾಡಿ ನಾಯಿಗಳಿಗೆ ಬಲಿಯಾಗಿರುವ ಉದಾಹರಣೆಗಳಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಗರದ ಪಶುವೈದ್ಯ ಆಸ್ಪತ್ರೆಗೆ ಪೂರ್ಣಕಾಲಿಕ ವೈದ್ಯರ ನೇಮಕಾತಿ ಅಥವಾ ಸಂಚಾರಿ ಪಶುವೈದ್ಯ ಆಸ್ಪತ್ರೆಯನ್ನಾದರೂ ನೀಡಬೇಕೆಂಬ ಆಗ್ರಹಗಳು ಕೇಳಿ ಬರಲಾರಂಭಿಸಿವೆ.