ಯಳಂದೂರು : ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಕೆ . ದೇವರಹಳ್ಳಿ ಗ್ರಾಮದ ಬಳಿ ಅಕ್ರಮವಾಗಿ ಮಾಕಳಿ ಬೇರು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಭಾರಿ ಪ್ರಮಾಣ ಮಾಕಳಿ ಬೇರು ವಶಪಡಿಸಿಕೊಂಡು ಮೂವರನ್ನು ಬಂಧಿಸಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ .
ಈ ಸಂಬಂಧ ಜಕ್ಕಳ್ಳಿ ಗ್ರಾಮದ ಪರಿಯನಾಯಗಂ , ಸೊಸೈರಾಜು , ಸಿರಾಜು ಎಂಬುವವರನ್ನು ಬಂಧಿಸಲಾಗಿದೆ . ಹೊಂಗನೂರು , ಬೆಲ್ಲವು ಗ್ರಾಮದ ರಸ್ತೆಯಲ್ಲಿ ಚಾಮರಾಜನಗರ ಪ್ರಾದೇಶಿಕ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದೆ . ಇಲ್ಲಿ ಅಕ್ರಮವಾಗಿ ಮಾಕಳಿ ಬೇರು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಆಧಾರದ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ತಂಡ ಒಟ್ಟು 935 ಕಿಲೋ ತೂಕದ ಬೇರನ್ನು ವಶಪಡಿಸಿಕೊಂಡಿದೆ.
ಇದರ ಸಾಗಾಟಕ್ಕೆ ಬಳಸಲಾಗಿದ್ದ ಒಂದು ಟಾಟಾ ಏಸ್ ಹಾಗೂ ಹುಂಡೈ ಇಯಾನ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ . ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ .
ದಾಳಿ ಮಾಡಲು ಸಿದ್ಧವಾಗಿದ್ದ ತಂಡ : ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರತಿದಾಳಿ ನಡೆಸಲು ಕಳ್ಳರ ತಂಡ ಪ್ರಯತ್ನ ನಡೆಸಿದೆ . ಕಾರಿನಲ್ಲಿದ್ದ ಇಬ್ಬರು ಚಾಮರಾಜನಗರ ಅರಣ್ಯ ವಲಯದ ಬೊಲೆರೋ ಜೀಪಿಗೆ ಇಯಾನ್ ಕಾರಿನಿಂದ ಗುದ್ದಿದ್ದಾರೆ . ಇದರ ರಭಸಕ್ಕೆ ಬೊಲೆರೋ ವಾಹನ ಜಖಂಗೊಂಡಿದೆ . ಇಯಾನ್ ವಾಹನದ ಮುಂಭಾಗವೂ ನಜ್ಜುಗೊಜ್ಜಾಗಿದ್ದು ಇದನ್ನು ಅಲ್ಲೇ ಬಿಟ್ಟು ಪರಾರಿಯಾಗಿರುವ ಖದೀಮರ ಶೋಧಕ್ಕೆ ಅರಣ್ಯ ಇಲಾಖೆ ಬಲೆ ಬೀಸಿದೆ .
ಈ ಕಾರ್ಯಾಚರಣೆಯಲ್ಲಿ ಎಸಿಎಫ್ ಬಿ.ಆರ್ . ರಮೇಶ್ , ಆರ್‌ಎಫ್‌ಒ ಲೋಕೇಶ್‌ಮೂರ್ತಿ ಡಿಎಫ್‌ಆರ್‌ಒ ಗೋವರ್ಧನ್ , ವರುಣ್‌ಕುಮಾರ್ , ರಮೇಶ್ . ಪುನೀತ್‌ಕುಮಾರ್ , ಅಮರ್‌ನಾಥ್ ಅರಣ್ಯ ರಕ್ಷರಾದ ಡಿ.ಕೆ. ಮಧು . ವಿಕ್ರಮ್ , ಬಸವರಾಜಅಬ್ಬಾಳ್ , ಭೀಮ್‌ಶಿ . ಕಾಡೇಶ್ , ಚಂದಪ್ಪಗೌಟ್ , ವೀಕ್ಷಕರಾದ ರಂಗಸ್ವಾಮಿ ಮಣಿಕಂಠ , ಫೈರೋಜ್ , ಕುಮಾರಸ್ವಾಮಿ ಶ್ರೀಕಂಠ ವಾಹನ ಚಾಲಕರಾದ ಪರಶಿವ , ಸುಜ್ಞಾನಮೂರ್ತಿ ಭಾಗವಹಿಸಿದ್ದರು .