ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ (ಬಿಆರ್‌ಟಿ) ಅರಣ್ಯದ ಕೆ. ಗುಡಿ ವಲಯದಲ್ಲಿ ಮಂಗಳವಾರ ಸಫಾರಿಗೆ ತೆರಳಿದವರಿಗೆ ಮೂರು ಹುಲಿಗಳು ದರ್ಶನ ನೀಡಿವೆ.
ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸುಮಾರು 30 ರಿಂದ 35 ಹುಲಿಗಳಿರಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಇಲ್ಲಿ ಸಫಾರಿಗೆ ತೆರಳಿದವರಿಗೆ ಹುಲಿಗಳ ದರ್ಶನವಾಗುವುದು ಅಪರೂಪ. ಸಫಾರಿಗೆ ಹೋದವರಿಗೆ ಅದೃಷ್ಟವಿದ್ದರೆ ಎಲ್ಲೋ ಒಂದು ಹುಲಿ ದರ್ಶನವಾದರೂ ಸಿಕ್ಕಬಹುದು.
ಮಂಗಳವಾರ (ಫೆ.9) ಕೆ.ಗುಡಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಜೀಪಿನಲ್ಲಿ ಸಫಾರಿಗೆ ತೆರಳಿದವರ ಅದೃಷ್ಟ ಚೆನ್ನಾಗಿತ್ತು. ಸಫಾರಿಯ ಗೇಮ್ ರೋಡಿನಲ್ಲಿ ಜೀಪಿನಲ್ಲಿ ಹೋಗುತ್ತಿದ್ದ ಪ್ರವಾಸಿಗರಿಗೆ ಮೊದಲಿಗೆ ಎರಡು ಹುಲಿಗಳ ದರ್ಶನ ದೊರೆಯಿತು. ಅರೆ! ಎಂದು ಆಶ್ವರ್ಯಪಡುತ್ತಿದ್ದಂತೆಯೇ, ಇನ್ನೊಂದು ಹುಲಿ ಬದಿಯಿಂದ ಬಂದು ಈ ಎರಡು ಹುಲಿಗಳ ಜೊತೆಯಾಯಿತು.
ಇದನ್ನೂ ಓದಿ:ಆರೋಗ್ಯಕ್ಕೂ, ಸೌಂದರ್ಯಕ್ಕೂ ಅಲೋವೆರಾ ಸಿದ್ದೌಷಧ
ಹಿಂದೆ ತಿರುಗಿ ನೋಡಿದ ಹುಲಿಗಳು, ಮತ್ತೆ ಬೆನ್ನು ಹಾಕಿ ಅದೇ ಗೇಮ್ ದಾರಿಯಲ್ಲಿ ನಡೆದು ಮುಂದೆ ಸಾಗಿದವು. ಒಟ್ಟಿಗೆ ಮೂರು ಹುಲಿಗಳನ್ನು ಏಕಕಾಲದಲ್ಲಿ ಕಂಡ ಪ್ರವಾಸಿಗರು ಸಂತಸಪಟ್ಟರು.
ಈ ವಿಡಿಯೋವನ್ನು ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ಕುಮಾರ್ ಅವರು ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.