Advertisement

ಸತತವಾಗಿ ಸುರಿದ ಮಳೆ: ನಾವದಗಿ ಹನುಮ ದೇವಾಲಯದ ಗರ್ಭಗುಡಿ ನೆಲಸಮ

07:38 PM Aug 30, 2021 | Team Udayavani |

ಭಾಲ್ಕಿ: ಸೋಮವಾರ  ನಸುಕಿನ ಜಾವದಲ್ಲಿ ಸತತವಾಗಿ ಸುರಿದ ಮಳೆಯಿಂದ ತಾಲೂಕಿನ ನಾವದಗಿ ಗ್ರಾಮದ ಹನುಮ ದೇವಾಲಯದ ಗರ್ಭಗುಡಿ ಕಳಸ ಸಮೇತ ನೆಲಸಮವಾಗಿದೆ. ಹಳ್ಳದ ಪಕ್ಕದಲ್ಲಿರುವ ಮನೆಗಳಲ್ಲಿ ನೀರು ನುಗ್ಗಿ, ಮನೆಯಲ್ಲಿರುವವರಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

Advertisement

ಸೋಮವಾರ ನಸುಕಿನ ಜಾವದಿಂದಲೇ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ಹಲವು ಗ್ರಾಮಗಳ ಮನೆಗಳಲ್ಲಿ ನೀರು ನುಗ್ಗಿ ಮನೆಯಲ್ಲಿರುವ ಎಲ್ಲಾ ಸಾಮಾನುಗಳು ನೀರು ಪಾಲಾಗಿವೆ. ಭಾಗಶಹ ಗೋಡೆ ಕುಸಿದಿರುವುದು, ಸೇರಿದಂತೆ ಮಳೆಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ಖುದ್ದು ತಾಲೂಕು ದಂಡಾಧಿಕಾರಿಗಳು ಗ್ರಾಮಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದರು.

ಅಲ್ಲದೆ ನಾವದಗಿ ಗ್ರಾಮದ ಹಳ್ಳದ ಪಕ್ಕದಲ್ಲಿರುವ ಹನುಮ ದೇವಾಲಯದ ಗರ್ಭಗುಡಿಯು ಕಳಸ ಸಮೇತ ನೆಲಸಮ ವಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಾಗೆಯೇ ಹಳ್ಳದ ಪಕ್ಕದಲ್ಲಿರುವ ಸೂರ್ಯಕಾಂತ ಬಡಿಗೇರ, ಕಲ್ಲಪ್ಪಾ ಹರಿಜನ ಸೇರಿದಂತೆ ಸುಮಾರು ಐದಾರು ಮನೆಗಳಲ್ಲಿ ನೀರು ನುಗ್ಗಿ ಮನೆಯಲ್ಲಿರುವ ಎಲ್ಲಾ ಸಾಮಾನುಗಳು ಹಾಳಾಗಿವೆ. ಇದರಿಂದ ಈ ಮನೆಯ ನಿವಾಸಿಗರನ್ನು ಗ್ರಾಮದ ಹೊರವಲಯದಲ್ಲಿರುವ ಆಯುಸ್ಮಾನ್ ಭವನದಲ್ಲಿರುವ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ತಹಸಿಲ್ದಾರ ಭೇಟಿ: ಮಳೆಯಿಂದ ಹಾನಿಗೊಳಗಾದ ಗ್ರಾಮಗಳಾದ ಏಣಕೂರ, ನಾವದಗಿ, ದಾಡಗಿ, ಮದಕಟ್ಟಿ, ಮಾವಿನಹಳ್ಳಿ, ವರವಟ್ಟಿ(ಬಿ) ಸೇರಿದಂತೆ ಮುಂತಾದ ಗ್ರಾಮಗಳಿಗೆ ತಹಸೀಲ್ದಾರ ಕೀರ್ತಿ ಚಾಲಕ ಮತ್ತು ತಾ.ಪಂ. ಈ.ಓ ದೀಪಿಕಾ ನಾಯ್ಕರ್ ರವರು ಭೇಟಿ ನೀಡಿ ಪರಿಶೀಲಿಸಿ, ಹಾನಿಗೊಳಗಾದ ಮನೆ ಮತ್ತು ಗ್ರಾಮಗಳ ಆಸ್ತಿಯ ಬಗ್ಗೆ ಪರಿಶೀಲಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.

ನಾವದಗಿ ಗ್ರಾಮದ ಹನುಮ ದೇವಾಲಯದ ಗರ್ಭಗುಡಿ ಸೇರಿದಂತೆ ಗ್ರಾಮದ ಮಧ್ಯದಲ್ಲಿರುವ ದೊಡ್ಡ ದೊಡ್ಡಿಯ ದ್ವಾರ ಬಾಗಿಲು ಈ ಹಿಂದೆ ಮಳೆಯಿಂದ ಕುಸಿದು ಬಿದ್ದಿದ್ದು, ಅದನ್ನೂ ಪರಿಶೀಲಿಸಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಸೇರಿದಂತೆ ವಿವಿಧ ಅಧಿಕಾರಿ ವರ್ಗದವರು ಜೊತೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next