ಬೆಂಗಳೂರು: “ನನ್ನ ಗಂಡನ ಜೀವ ಅಂತೂ ವಾಪಸ್ ಬರಲ್ಲ. ನಮಗೆ ಮುಂದೆ ಯಾರು ದಿಕ್ಕು. ತಂದೆ ಮುಖ ನೋಡಲು ಮಗನಿಗೆ ಅವಕಾಶ ನೀಡಲಿಲ್ಲ. ನನ್ನ ಗಂಡನ ಕೈಕಾಲು ಕಟ್ಟಿ ಹಾಕಿ ಚಿಕಿತ್ಸೆ ಕೊಟ್ಟಿದ್ದಾರೆ.
ಆ ರೀತಿ ಕಟ್ಟಿ ಹಾಕಿ ಚಿಕಿತ್ಸೆ ಕೊಡುವ ಅಗತ್ಯವೇನಿತ್ತು? ನನ್ನ ಗಂಡನ ಸಾವಿಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರೇ ಕಾರಣ. ನಮಗೆ ಆಗಿರುವ ಅನ್ಯಾಯ ಯಾರಿಗೂ ಆಗಬಾರದು.’ ಹೀಗೆ… ಕೊರೊನಾ ಸೋಂಕಿನಿಂದ ತನ್ನ ಗಂಡನನ್ನು ಕಳೆದುಕೊಂಡ ಪತ್ನಿ ನಗರದ ಮೇಡಿ ಅಗ್ರಹಾರ ಚಿತಾಗಾರದ ಬಳಿ ಭಾನುವಾರ ತನ್ನ ಮಗನನ್ನು ತಬ್ಬಿಕೊಂಡು ಕಣ್ಣೀರಿಟ್ಟ ದೃಶ್ಯ ಎಂಥವರ ಕಣ್ಣಂಚಲ್ಲೂ ನೀರು ತರಿಸುವಂತಿತ್ತು.
ಕೊರೊನಾ ಸೋಂಕಿನಿಂದ ನಿತ್ಯ ಬೆಂಗಳೂರಿನಲ್ಲಿ ಅನೇಕ ರೀತಿಯ ಮನಕಲಕುವ ಘಟನೆ ನಡೆಯುತ್ತಿವೆ. ಇದರ ನಡುವೆ ಭಾನುವಾರ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಬಯಲಾಗಿದೆ. ನನ್ನ ಗಂಡನಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ಎಲ್ಲಾ ವೈದ್ಯರು ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಆರೋಪಿಸಿದ್ದಾರೆ.
ಎಷ್ಟೇ ಅಲೆದರೂ ಬೆಡ್ ಸಿಗಲಿಲ್ಲ: ನಗರದ ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದೆವು. ಆಗ ಕೊರೊನಾ ಪಾಸಿಟಿವ್ ಬಂತು. ಎಷ್ಟೇ ಪ್ರಯತ್ನಿಸಿದರೂ ಖಾಸಗಿಆಸ್ಪತ್ರೆಗಳಲ್ಲಿ ಬೆಡ್ ಸಿಗಲೇ ಇಲ್ಲ. ಮೂರು ದಿನಗಳ ನಂತರವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದೆವು. ವಿಕ್ಟೋರಿಯಾದಲ್ಲಿ ಕೊರೊನಾ ಪರೀಕ್ಷೆ ವೇಳೆ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದರೆ, ಅಲ್ಲಿನ ಸಿಬ್ಬಂದಿ ಹೇಗಿದ್ದರೂ ಕೋವಿಡ್ ವಾರ್ಡ್‌ಗೆ ಬಂದಿದ್ದೀರಿ. ಚಿಕಿತ್ಸೆ ಪಡೆಯಿರಿ ಎಂದು ಒತ್ತಾಯ ಪೂರ್ವಕವಾಗಿ ಕೂಡಿಟ್ಟು ಚಿಕಿತ್ಸೆ ನೀಡಿದ್ದಾರೆ.
ಆದರೆ ಯಾವ ರೀತಿ ಚಿಕಿತ್ಸೆ ನೀಡಿದರು ಎಂದು ಮಾಹಿತಿಯಿಲ್ಲ ಎಂದು ಕಣ್ಣೀರಾದರು. ಗಂಡನ ಜೊತೆ ಮಾತನಾಡಲೂ ಬಿಡಲಿಲ್ಲ”ನನ್ನ ಪತಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆಯನ್ನೇ ನೀಡಿಲ್ಲ. ಆಸ್ಪತ್ರೆಗೆ ದಾಖಲಾಗುವಾಗ ಸ್ಮಾರ್ಟ್‌ಫೋನ್ ಬೇಡ. ಕೀ ಪ್ಯಾಡ್ ಸೆಟ್ ಮಾತ್ರ ಬಳಸಲು ಅವಕಾಶವಿದೆ ಎಂದಿದ್ದರು. ಅದನ್ನೂ ಕೂಡ ಯಾರೋ ಕದ್ದಿದ್ದಾರೆ. ಕರೆ ಮಾಡಿದರೆ ರಿಂಗ್ ಆಗುತ್ತದೆ. ಆದರೆ, ಯಾರು ಪಿಕ್ ಮಾಡುತ್ತಿಲ್ಲ. ಕಳೆದ ಎರಡು ದಿನದಿಂದ ನನ್ನ ಗಂಡನ ಹತ್ತಿರ ಮಾತನಾಡಲೂ ಆಗಲಿಲ್ಲ. ನೀವೆ ಕಾಂಟ್ಯಾಕ್ಟ್ ಮಾಡಿಸಿ ಅಥವಾ ಮಾತನಾಡಲು ಅವಕಾಶ ಮಾಡಿಕೊಡಿ ಎಂದರೂ ವೈದರು ಅವಕಾಶ ಕಲ್ಪಿಸಲಿಲ್ಲ. ಒಳಗಡೆಯಾರನ್ನೂ ಸೇರಿಸಲ್ಲ ಎಂದು ಹೊರಗಡೆ ಕಳುಹಿಸಿ ಗೇಟ್ ಹಾಕಿದರು. ಕೊನೆಗೂ ಗಂಡನ ಮುಖನೋಡಲು ಬಿಡಲಿಲ್ಲ’ ಎಂದು ಕಣ್ಣೀರಿಟ್ಟರು.