Advertisement

ವರ್ಷದ ಹಿಂದೆ ಬೆಚ್ಚಿ ಬಿದ್ದಿತ್ತು ಗುಮ್ಮಟ ನಗರಿ

08:15 PM Apr 12, 2021 | Girisha |

ವಿಜಯಪುರ: ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ -19 ಕೊರೊನಾ ಸೋಂಕು ರೋಗ ಐತಿಹಾಸಿಕ ವಿಜಯಪುರ ನಗರದಲ್ಲಿ ಒಂದೇ ದಿನ 6 ಸೋಂಕಿತರ ಮೂಲಕ ಜಿಲ್ಲೆಗೂ ಕಾಲಿಟ್ಟಿದ್ದ ದಿನವಿದು. ಇದೀಗ ಕೋವಿಡ್‌ ಎರಡನೇ ಅಲೆಯ ಆತಂಕ ಹೆಚ್ಚಿಸಿದ್ದರೂ ಮೊದಲ ಸೋಂಕಿತರ ಮೂಲಕ ಜಿಲ್ಲೆಯ ಜನರ ನೆಮ್ಮದಿಗೆ ಕುತ್ತು ತಂದಿಟ್ಟ ವರ್ಷದ ಹಿಂದಿನ ಈ ರವಿವಾರಕ್ಕೆ ಇದೀಗ ವರ್ಷದ ಕಹಿ ನೆನಪು. ಜೊತೆಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೀಲ್‌ಡೌನ್‌ ಶಬ್ದ ಜಿಲ್ಲೆಯ ಜನರ ನಾಲಿಗೆಯಲ್ಲಿ ಕೇಳತೊಡಗಿತ್ತು.

Advertisement

ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರಲ್ಲಿ ಮೊದಲ ವ್ಯಕ್ತಿ ಮೃತಪಟ್ಟಿದ್ದ ಘಟನೆ, ಬಾಗಲಕೋಟೆ ಜಿಲೆಯಲ್ಲಿ ಸೋಂಕಿತರು ಪತ್ತೆಯಾದಾಗ ಇವರು ವಿಜಯಪುರ ಜಿಲ್ಲೆಯಲ್ಲಿ ನಡುಕ ಹೆಚ್ಚಿತ್ತು. ಏಕೆಂದರೆ ಈ ಎರಡೂ ಜಿಲ್ಲೆಗಳು ವಿಜಯಪುರ ಜಿಲ್ಲೆಗೆ ಹೊಂದಿಕೊಂಡು ಗಡಿಯಲ್ಲೇ ಇದ್ದು, ಅಲ್ಲಿನ ಸೋಂಕಿತರು ಬಸವನಾಡಿನಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಬಂದಿತ್ತು.

ಈ ಅಲ್ಲಿನ ಸೋಂಕಿತರ ಪ್ರಯಾಣದ ಜಾಡು ಪತ್ತೆ ಹಚ್ಚುವ ಧಾವಂತವೂ ಆರಂಭಗೊಂಡಿತ್ತು. ಇದರ ಬೆನ್ನಲ್ಲೇ ವಿಜಯಪುರ ಜಿಲ್ಲಾಡಳಿತ ಇಡಿ ಜಿಲ್ಲೆಯ ಗಡಿಯಲ್ಲಿ ಹೊರಗಿನವರು ಪ್ರವೇಶಿಸದಂತೆ ಏನೆಲ್ಲ ಸಾಧ್ಯವೋ ಅದೆಲ್ಲ ನಿರ್ಬಂಧದ ಸಹಿತ ತೀವ್ರ ನಿಗಾ ಇರಿಸಿತ್ತು. ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ನೇತೃತ್ವದ ಎಸ್ಪಿ ಅನುಪಮ್‌ ಅಗವಾಲ್‌ ಅವರ ತಂಡ ಏನೆಲ್ಲ ನಿರ್ಬಂಧ, ಧಾವಂತದ ಮಧ್ಯೆಯೇ ಸರಿಯಾಗಿ 365 ದಿನಗಳ ಹಿಂದಿನ (ಏ. 12) ರವಿವಾರ ಮುಂಗೋಳಿ ಕೂಗಿನೊಂದಿಗೆ ವಿಜಯಪುರ ಜಿಲ್ಲೆಯಲ್ಲೂ ಕೋವಿಡ್‌-19 ಸೋಂಕೂ ಚೀತ್ಕಾರ ಮಾಡಿತ್ತು. ಅಂದು ಬೆಳಗ್ಗೆ ಓರ್ವ ವೃದ್ಧೆಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದ ಜಿಲ್ಲಾಡಳಿತ ಸಂಜೆ ವೇಳೆಗೆ ಮತ್ತೆ ಐವರಲ್ಲಿ ಸೋಂಕು ದೃಢಪಟ್ಟಿದ್ದನ್ನು ಅಧಿಕೃತಗೊಳಿಸಿತ್ತು.

ಇದಕ್ಕೂ ಮೊದಲು ಗೋಲಗುಮ್ಮಟ-ಬಡಿಕಮಾನ್‌ ಭಾಗದ ಇಡಿ ಪ್ರದೇಶವನ್ನು ಸೀಲ್‌ಡೌನ್‌ ಮಾಡಿ, ಗಲ್ಲಿ ಗಲ್ಲಿಗಳನ್ನೂ ಕಲ್ಲು-ಮುಳ್ಳು ಬೇಲಿ ಹಾಕಿ ನಿರ್ಬಂಧಿಸಲಾಗಿತ್ತು. ಅಂದಿನ ರವಿವಾರ ಬೆಳಗ್ಗೆ ಮನೆಯಿಂದ ಯಾರೂ ಹೊರ ಬರದಂತೆ ಧ್ವನಿವರ್ಧಕದ ಮೂಲಕ ಜನರಿಗೆ ಮಾಹಿತಿ ನೀಡಿದಾಗಲೇ ವಿಜಯಪುರ ನಗರಕ್ಕೂ ಕೋವಿಡ್‌ ಸೋಂಕು ಪ್ರವೇಶ ಮಾಡಿದ್ದು ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯಾಗಿ ಮಾಹಿತಿ ನೀಡಿತ್ತು.

ಲಾಕ್‌ಡೌನ್‌ ಪರಿಣಾಮ ಎರಡು ವಾರಗಳಿಂದ ಮನೆಗಳಲ್ಲಿ ಬಂಧಿ ಯಾಗಿದ್ದ ಜಿಲ್ಲೆಯ ಜನರು ಕಂಗಾಲಾಗಿದ್ದ ದಿನಕ್ಕೆ ಇದೀಗ ವರ್ಷ. ಐತಿಹಾಸಿಕ ಗೋಲಗುಮ್ಮಟ ಪ್ರದೇಶದ ಛಪ್ಪರಬಂದ್‌ ಗಲ್ಲಿಯ ನಿವಾಸಿ 60 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟು, ಪಿ-221 ಸಂಖ್ಯೆ ಮೂಲಕ ಜಿಲ್ಲೆಯ ಕೊರೊನಾ ಮೊದಲ ಸೋಂಕಿತರು ಪತ್ತೆಯಾಗಿದ್ದರು.

Advertisement

ಇದರ ಬೆನ್ನಲ್ಲೇ ಅದೇ ಕುಟುಂಬ ಹಾಗೂ ನೆರೆ ಮನೆಯವರೂ ಸೇರಿದಂತೆ ಇನ್ನೂ ಐವರಲ್ಲೂ ಸೋಂಕು ಪತ್ತೆಯಾಗಿ 13 ವರ್ಷದ ಮಗು ಪಿ-228, 12 ವರ್ಷದ ಹೆಣ್ಣುಮಗು ಪಿ-229, 10 ವರ್ಷದ ಗಂಡು ಮಗು ಪಿ-230, 49 ವರ್ಷದ ವ್ಯಕ್ತಿ ಪಿ-231 ಹಾಗೂ 20 ವರ್ಷದ ಮಹಿಳೆ ಪಿ.232 ಎಂದು ಗುರುತಿಸಿದ್ದೇ ತಡ ಇಡಿ ಜಿಲ್ಲೆ ತಲ್ಲಣಗೊಂಡಿತ್ತು. ಮತ್ತೂಂದೆಡೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಸೋಂಕಿತೆ ಹಾಗೂ ಆಕೆಯ ಪತಿ ಇಬ್ಬರೂ ಮಹಾರಾಷ್ಟ್ರದ ಈಚಲಕರಂಜಿ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ ಜಾಡು ಹುಡುಕಲು ಮುಂದಾಗಿತ್ತು. ನಂತರ ಕೆಮ್ಮಿನ ಸಮಸ್ಯೆಯಿಂದ ನಗರದ ಹಲವು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಅಲೆದಿದ್ದ ಜಿಲ್ಲೆಯ ಮೊದಲ ಸೋಂಕಿತೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೊನೆಗೆ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಸೋಂಕಿನ ಲಕ್ಷಣಗಳಿದ್ದ ಕಾರಣಕ್ಕೆ ಗಂಟಲು ದ್ರವ ಪರೀಕ್ಷೆಯಲ್ಲಿ ವೃದ್ಧೆಗೆ ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಆಕೆಯ ಸಂರ್ಕದಲ್ಲಿದ್ದವರ ಗಂಟಲು ದ್ರವ ಪರೀಕ್ಷೆ ನಡೆಸಿತ್ತು. ಸೋಂಕು ದೃಢಪಡುತ್ತಲೇ ಜಿಲ್ಲಾಡಳಿತ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಎಲ್ಲ ರೋಗಿಗಳನ್ನು ನಗರದ ವಿವಿಧ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

ಮತ್ತೂಂದೆಡೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿತ್ತು. ಸೋಂಕಿತೆಯ ಕುಟುಂಬದ 23 ಸದಸ್ಯರನ್ನು ನಗರದ ಟಕ್ಕೆ ಪ್ರದೇಶದಲ್ಲಿ ಕೋವಿಡ್‌-19 ಕ್ವಾರಂಟೈನ್‌ ಘಟಕಕ್ಕೆ ದಾಖಲಿಸಿತ್ತು. ಸೀಲ್‌ಡೌನ್‌ ಪ್ರದೇಶದಲ್ಲಿ ಪೊಲೀಸರ ರಕ್ಷಣೆಯಲ್ಲಿ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು 2 ಸಾವಿರಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸಿದ್ದರು. ಮತ್ತೂಂದೆಡೆ ಸೀಲ್‌ಡೌನ್‌ ಪ್ರದೇಶದಲ್ಲಿ ಜನರು ಮನೆಯಿಂದ ಹೊರ ಬರದಂತೆ ಕಣ್ಗಾವಲು ಇರಿಸಲು ಎಸ್ಪಿ ಅನುಪಮ್‌ ಅಗರವಾಲ್‌ ನೇತೃತ್ವದಲ್ಲಿ ಡ್ರೋಣ್‌ ಕ್ಯಾಮರಾ ಹಾರಾಟ ನಡೆಸಿತ್ತು. ಸೀಲ್‌ ಮಾಡಿದ ಗಲ್ಲಿಗಳ ಪ್ರವೇಶ ಭಾಗದಲ್ಲಿ ಎಲ್ಲೆಡೆ ಪೊಲೀಸ್‌ ಕಾವಲು ಹಾಕಿ ಅಲ್ಲಲ್ಲಿ ಪೊಲೀಸ್‌ ವಾಹನಗಳನ್ನೂ ನಿಲ್ಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next