ಬೆಂಗಳೂರು: ಸಹೋದರಿಯನ್ನು ಕರೆದೊಯ್ದು ಬೇರೊಂದು ಮನೆಯಲ್ಲಿ ವಾಸಿಸಲು ಮುಂದಾಗಿದ್ದ ಗಾರ್ಮೆಂಟ್ಸ್ ಉದ್ಯೋಗಿಯನ್ನು ಆಟೋ ಚಾಲಕ ಸೇರಿ ನಾಲ್ವರು ಕೊಲೆಗೈದಿರುವ ಘಟನೆ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಕೃತ್ಯ ಎಸಗಿದ ಆರೋಪಿಗಳು ಮೃತದೇಹದ ಸಮೇತ ಠಾಣೆಗೆ ಬಂದು ಶರಣಾಗಿದ್ದಾರೆ.
ಹೊಸೂರಿನ ಬಿ.ಮದ್ದನಪಲ್ಲಿ ನಿವಾಸಿ ಭಾಸ್ಕರ್ (24) ಕೊಲೆಯಾದ ಗಾರ್ಮೆಂಟ್ಸ್ ಉದ್ಯೋಗಿ. ಕೃತ್ಯ ಎಸಗಿದ ಆಟೋ ಚಾಲಕ ಮುನಿರಾಜು(28), ಆತನ ಸಹಚರರಾದ ಕ್ಯಾಬ್ ಚಾಲಕ ನಾಗೇಶ್(22), ಪ್ರಶಾಂತ್(20) ಮತ್ತು ಐರನ್ ಅಂಗಡಿ ಇಟ್ಟುಕೊಂಡಿದ್ದ ಮಾರುತಿ(22) ಎಂಬವರು ಠಾಣೆಗೆ ಬಂದು ಶರಣಾಗಿದ್ದಾರೆ. ಶನಿವಾರ ತಡರಾತ್ರಿ ಕೆಬ್ಬಹಳ್ಳ ಸಮೀಪ ಭಾಸ್ಕರ್‌ನನ್ನು ಕರೆದೊಯ್ದು ಕೃತ್ಯ ಎಸಗಿದ್ದರು ಎಂದು ಪೊಲೀಸರು ಹೇಳಿದರು.
ಕೊಲೆಯಾದ ಭಾಸ್ಕರ್ ಹೊಸೂರು ಸಮೀಪದ ಬಾಗಲೂರಿನಲ್ಲಿರುವ ಗಾರ್ಮೆಂಟ್ಸ್‌ನಲ್ಲಿ ಮೇಲ್ವಿಚಾರಕನಾಗಿದ್ದ. ಅದೇ ಗಾರ್ಮೆಂಟ್ಸ್‌ನಲ್ಲಿ ಆರೋಪಿ ಮುನಿರಾಜು ಸಹೋದರಿ ಈ ಮೊದಲು ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರು ಆತ್ಮೀಯವಾಗಿದ್ದರು. ಈ ಮಧ್ಯೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ ಪತಿ ಮಕ್ಕಳ ಜತೆ ವಾಸವಾಗಿದ್ದ ಆಕೆ, 15 ದಿನಗಳ ಹಿಂದಷ್ಟೇ ಕೌಟುಂಬಿಕ ವಿಚಾರಕ್ಕೆ ಪತಿ ಹಲ್ಲೆ ನಡೆಸಿದರೂ ಎಂಬ ಕಾರಣಕ್ಕೆ ಇಬ್ಬರು ಮಕ್ಕಳನ್ನು ಜತೆಗೆ ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವಿಚಾರ ತಿಳಿದ ಭಾಸ್ಕರ್, ಶನಿವಾರ ಸಂಜೆ ಆಕೆಯ ಮನೆಗೆ ಬಂದು ಕೆಲ ಹೊತ್ತು ಮಾತುಕತೆ ನಡೆಸಿ, ಬೇರೆಡೆ ಮನೆ ಮಾಡುವುದಾಗಿ ಆಟೋದಲ್ಲಿ ಕರೆದೊಯ್ಯುತ್ತಿದ್ದ. ಆದರೆ, ಆಕೆಯ ಹಿರಿಯ ಪುತ್ರ ಹೋಗಲು ಇಷ್ಟವಿಲ್ಲದೆ, ಆಟೋದಿಂದ ನೆಗೆದು, ಈ ವಿಚಾರವನ್ನು ಮಾವ ಮುನಿರಾಜುಗೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಕೆಬ್ಬಹಳ್ಳದ ನಿರ್ಜನ ಪ್ರದೇಶದಲ್ಲಿ ಹತ್ಯೆ:
ಕೂಡಲೇ ಮುನಿರಾಜು ತನ್ನ ಮೂವರು ಸ್ನೇಹಿತರ ಜತೆ ಭಾಸ್ಕರ್ ಹೋಗುತ್ತಿದ್ದ ಆಟೋವನ್ನು ಹಿಂಬಾಲಿಸಿ ಸುಂಕದಕಟ್ಟೆ ಬಳಿ ಅಡ್ಡಗಟ್ಟಿ, ಸಹೋದರಿ, ಆಕೆ ಮಗು ಹಾಗೂ ಭಾಸ್ಕರ್‌ರನನ್ನು ಮನೆಗೆ ಕರೆದೊಯ್ದಿದ್ದಾನೆ. ಸಹೋದರಿ, ಮಗುವನ್ನು ತನ್ನ ಮನೆಗೆ ಬಿಟ್ಟು, ನಂತರ ಭಾಸ್ಕರ್‌ನನ್ನು ಕೆಬ್ಬಹಳ್ಳದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ರಾತ್ರಿ 10 ಗಂಟೆವರೆಗೆ ಹಲ್ಲೆ ನಡಸಿದ್ದಾರೆ. ಈ ವೇಳೆ ಭಾಸ್ಕರ್ ಹಸಿವಾಗುತ್ತಿದೆ ಎಂದಾಗ ಆತನಿಗೆ ಎಗ್‌ರೈಸ್ ತಂದು ಕೊಟ್ಟಿದ್ದಾರೆ. ಅನಂತರ ಬೇರೆಡೆ ಕರೆದೊಯ್ಯಲು ಆಟೋ ಹತ್ತಿಸಿಕೊಂಡು ಮತ್ತೆ ಮುನಿರಾಜು, ಭಾಸ್ಕರ್‌ನ ಹಣೆ, ತಲೆಗೆ ಹೊಡೆದಿದ್ದಾನೆ. ಆತ ತಕ್ಷಣ ಮೂಛೆì ಹೋಗಿದ್ದಾನೆ. ನಾಟಕ ಮಾಡುತ್ತಿದ್ದಾನೆ ಎಂದು ಆರೋಪಿಗಳು ಭಾವಿಸಿದ್ದರು. ಆದರೆ, ಸ್ವಲ್ಪ ಹೊತ್ತಿನ ಬಳಿಕ ಆತ ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಹೆಣದ ಜತೆ ಠಾಣೆಗೆ ಬಂದ ಆರೋಪಿಗಳು:
ಈ ವಿಚಾರವನ್ನು ಮುನಿರಾಜು ತನ್ನ ತಾಯಿಗೆ ತಿಳಿಸಿದ್ದು, ಬಳಿಕ ತನ್ನ ಸಹಚರರ ಜತೆ ಸೇರಿಕೊಂಡು ಮೃತದೇಹವನ್ನು ನಸುಕಿನ ಮೂರು ಗಂಟೆ ಸುಮಾರಿಗೆ ಆಟೋದಲ್ಲಿ ಹಾಕಿಕೊಂಡು ಅನ್ನಪೂರ್ಣೇಶ್ವರಿನಗರ ಠಾಣೆಗೆ ಬಂದಿದ್ದಾರೆ. ಬಳಿಕ ಘಟನೆಯನ್ನು ವಿವರಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕ ಮುನಿರಾಜು ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ.