ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ಬಳಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಜೀಪ್ ನಲ್ಲಿ ಕರೆದೊಯ್ಯುತ್ತಿದ್ದಾಗ ಹಾರಿ ಸಾವನಪ್ಪಿರುವ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದ್ದು, ಇದು ಸಾವಲ್ಲ ಕೊಲೆ ಎಂದು ಈತನ ಪೋಷಕರು ದೂರಿದ್ದಾರೆ.
ಸಮೀಪದ ಕುಂತೂರು ಮೋಳೆ ಗ್ರಾಮದ ನಿಂಗರಾಜು(24) ಎಂಬ ವ್ಯಕ್ತಿಯೇ ಮೃತಪಟ್ಟ ದುರ್ದೈವಿ.
ಏನಿದು ಪ್ರಕರಣ: ಸಮೀಪದ ಕುಂತೂರು ಮೋಳೆ ಗ್ರಾಮದ ಉಪ್ಪಾರ ಬಡಾವಣೆಯ ನಂಜುಂಡಶೆಟ್ಟಿ ಎಂಬುವವರ ಮಗ ನಿಂಗರಾಜು ಇದೇ ಗ್ರಾಮದ ಇದೇ ಸಮುದಾಯದ 16.8 (ತಿಂಗಳು) ವರ್ಷದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ನ.23 ರಿಂದ ಇವರು ಗ್ರಾಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಯುವತಿಯ ತಂದೆ ಮಾದೇಶ್ ಎಂಬುವವರು ತಾಲೂಕಿನ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನನ್ನ ಮಗಳು ಬಹಿರ್ದೆಸೆಗೆ ತೆರಳಿ ಮನೆಗೆ ವಾಪಸ್ ಬಂದಿಲ್ಲ.
ಈ ಹಿಂದೆ ನನ್ನ ಮಗಳನ್ನು ನಿಂಗರಾಜು ಎಂಬುವವರ ತಂದೆ ಮದುವೆ ಮಾಡಿಕೊಡಿ ಎಂದು ಕೇಳಿದ್ದರು. ಆದರೆ, ಈಕೆಗೆ 18 ವರ್ಷ ತುಂಬಿಲ್ಲ ಎಂದು ನಾನು ನಿರಾಕರಿಸಿದ್ದೆ. ಹಾಗಾಗಿ ನಿಂಗರಾಜು ಎಂಬುವವನೇ ನನ್ನ ಮಗಳನ್ನು ಕರೆದೊಯ್ದಿದ್ದಾನೆ ಎಂದು ಅನುಮಾನವಿದೆ ಎಂದು ದೂರು ನೀಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ನಿಂಗರಾಜು ನ.29 ರಂದು ಪತ್ತೆ ಹಚ್ಚಿದ್ದಾರೆ.
ನಂತರ ಇವರ ಜೀಪ್‌ನಲ್ಲಿ ಯಳಂದೂರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇಲ್ಲಿ ವಿಚಾರಣೆ ನಡೆಸಿ ಮಾಂಬಳ್ಳಿ ಪೊಲೀಸ್ ಠಾಣೆಗೆ ಜೀಪ್‌ನಲ್ಲಿ ಕರೆದೊತ್ತುತ್ತಿದ್ದ ವೇಳೆ ಈತ ಯರಿಯೂರು ಗ್ರಾಮದ ಬಳಿ ಜೀಪ್‌ನಿಂದ ನೆಗೆದಿದ್ದು, ಈತನ ತಲೆ ಸೇರಿ ದೇಹದ ಇತರ ಭಾಗಗಳಿಗೆ ಪೆಟ್ಟಾಗಿದೆ. ಕೂಡಲೇ ಪೊಲೀಸರು ಜೀಪ್‌ನಲ್ಲಿ ಯಳಂದೂರಿನ ಸಾರ್ವ ಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಇಷ್ಟೊತ್ತಿಗಾಗಲೇ ನಿಂಗರಾಜು ಮೃತಪಟ್ಟಿರುವುದು ದೃಢಪಟ್ಟಿದೆ.
ಇದು ಆತ್ಮಹತ್ಯೆಯಲ್ಲಿ ಕೊಲೆ: ನಿಂಗರಾಜು ಜೀಪ್ ನಿಂದ ಹಾರಿ ಮೃತಪಟ್ಟಿಲ್ಲ. ಈತನಿಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದು ಹಿಗ್ಗಾಮಗ್ಗ ಥಳಿಸಲಾಗಿದೆ. ಅಲ್ಲೇ ಈತನ ಪ್ರಾಣ ಹೋಗಿದೆ. ನಂತರ ಮಾಂಬಳ್ಳಿ ಠಾಣೆಗೆ ಈತನನ್ನು ಜೀಪ್‌ನಲ್ಲಿ ಕುಳ್ಳಿರಿಸಿ, ಇವರೇ ಬೇಕೆಂತಲೇ ಜೀಪ್ ನಿಂದ ತಳ್ಳಿದ್ದಾರೆ ಎಂದು ಗ್ರಾಮಸ್ಥರು, ಉಪ್ಪಾರ ಮುಖಂಡರು ಆರೋಪಿಸಿ ಠಾಣೆ ಮುಂದೆ ಪ್ರತಿಭಟಿಸಿದರು.
ತನಿಖೆ ನಡೆಯಲಿ: ಅಲ್ಲದೆ, ವಿಚಾರಣೆ ವೇಳೆಯಲ್ಲಿ ಒಬ್ಬ ವ್ಯಕ್ತಿಯ ಪ್ರಾಣ ಹೋಗಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡುವಂತಿದೆ. ಇದರ ಬಗ್ಗೆ ತನಿಖೆಯಾಗಬೇಕು. ಈ ಸಾವು ಹಲವು ಅನುಮಾನಗಳಿಗೆ ಆಸ್ಪದ ನೀಡುವಂತಿದೆ. ಹಾಗಾಗಿ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು, ಪರಿಹಾರ ನಿಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಈ ಬಗ್ಗೆ ತನಿಖೆ ನಡೆಸಿ, ಪೊಲೀಸರಿಂದ ತಪ್ಪಾಗಿದ್ದಲ್ಲಿ ಕಾನೂನು ಕ್ರಮ ವಹಿಸುವ ಭರವಸೆ ನೀಡಿದರು.