ಯಲಹಂಕ: ನಗರದ ರಕ್ಕಸ ರಸ್ತೆ ಗುಂಡಿಗೆ ಮತ್ತೂಂದು ಜೀವ ಬಲಿಯಾಗಿದೆ. ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಕಾರು ಚಾಲಕನೊಬ್ಬ ಎದುರು ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹರ್ಷದ್ (23) ಮೃತ ಬೈಕ್‌ನ ಹಿಂಬದಿ ಸವಾರ. ಘಟನೆಯಲ್ಲಿ ಬೈಕ್ ಸವಾರ ರಾಹುಲ್ ಗಾಯಗೊಂಡಿದ್ದಾನೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ರಾಹುಲ್ ತನ್ನ ಬೈಕ್‌ನಲ್ಲಿ ಹರ್ಷದ್‌ನನ್ನು ಹಿಂಬದಿ ಕೂರಿಸಿಕೊಂಡು ಅಟ್ಟೂರು ಗ್ರಾಮದ ಕಡೆಯಿಂದ ಜಾಲಹಳ್ಳಿ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ. ಇದೇ ವೇಳೆ ಎದುರಿಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆಗೆ ಉರುಳಿ ಬಿದ್ದ ಇಬ್ಬರ ತಲೆಗೆ ಗಂಭೀರ ಗಾಯಗಳಾಗಿವೆ.
ಕೂಡಲೇ ಸ್ಥಳೀಯರು ಇಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಹರ್ಷದ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ರಾಹುಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.
ಯಲಹಂಕದ ರಾಯನ್ ಕಾನ್‌ಕಾರ್ಡ್ ಶಾಲೆ ರಸ್ತೆ ಗುಂಡಿಮಯವಾಗಿದ್ದು, ಕಳೆದ ತಡರಾತ್ರಿ 11 ಗಂಟೆ ಸುಮಾರಿಗೆ ಕಾರು ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಈ ವೇಳೆ ಎದುರು ಸಿಕ್ಕ ಗುಂಡಿಯನ್ನು ತಪ್ಪಿಸುವ ಭರದಲ್ಲಿ ಎದುರು ಬರುತ್ತಿದ್ದ ರಾಹುಲ್ ಮತ್ತು ಹರ್ಷದ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಮತ್ತೂಂದೆಡೆ ಘಟನೆಗೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಕಾರಣನಾದ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ದುರ್ಘಟನೆಗೆ ಬಿಬಿಎಂಪಿ ಮತ್ತು ಕಾರುಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೂಂದೆಡೆ ಬೈಕ್ ಚಾಲಕ ಮದ್ಯ ಸೇವಿಸಿದ್ದ ಎಂದು ಹೇಳಲಾಗಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.