ವಿಜಯಪುರ: ಜಿಲ್ಲೆಯ ತಿಕೋಟಾ ಗ್ರಾ.ಪಂ.ನಲ್ಲಿ ಖೊಟ್ಟಿ ಠರಾವು ಮಂಡಿಸಿ ಆಸ್ತಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷದಿಂದ ಅಲೆದರೂ ನ್ಯಾಯ ಸಿಕ್ಕಿಲ್ಲ, ನೀವಾದರೂ ನ್ಯಾಯಕೊಡಿ ಎಂದು ನಗರದ ಆಯುರ್ವೇದ ವೈದ್ಯರೊಬ್ಬರು ಉಪ ಲೋಕಾಯುಕ್ತರ ಎದುರು ಅಳಲು ನೋಡಿಕೊಂಡ ಘಟನೆ ಜರುಗಿತು.
ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ, ಜಿ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಮುಗಿಸಿ ಹೊರ ಬರುತ್ತಿದ್ದಂತೆ ಮನವಿ ಸಲ್ಲಿಸಿದ ಆಯುರ್ವೇದ ವೈದ್ಯ ಡಾ. ರಾಜು ಬೆಳಗಾವಿ, ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಅಧಿಕಾರಿಗಳು ತಮಗೆ ಆಗಿರುವ ಅನ್ಯಾಯದ ಕುರಿತು ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕೂಡಲೇ ಕ್ರಮಕೈಗೊಂಡು ನ್ಯಾಯ ಕೊಡಿಸುವಂತೆ ಅಂಗಲಾಚಿದರು.
ತಿಕೋಟಾ ಗ್ರಾಪಂನ ಈ ಹಿಂದಿನ ಪಿಡಿಒ ಹಾಗೂ 29 ಸದಸ್ಯರು ಸೇರಿ ಜೀವಂತವಿದ್ದ ಅಜ್ಜಿಯನ್ನು ಸತ್ತಿರುವುದಾಗಿ ಠರಾವು ಮಂಡಿಸಿ ಅಜ್ಜಿ ಹೆಸರಿನ ಆಸ್ತಿಯನ್ನು ಬೇರೊಬ್ಬರ ಹೆಸರಿಗೆ ನೋಂದಾಯಿಸಿ ಠರಾವು ಮಂಡಿಸಿದ್ದಾರೆ. ಈ ಬಗ್ಗೆ ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಆದರೂ ಈವರೆಗೆ ಕ್ರಮವಾಗಿಲ್ಲ. ಸದರಿ ಠರಾವು ರದ್ಧತಿಗಾಗಿ ತಾಪಂ ಇಒ ಸುಮಾರು 15 ತಿಂಗಳ ಸುದೀರ್ಘ ತನಿಖೆ ನಡೆಸಿ ಇದೀಗ ಅಸ್ತಿತ್ವಕ್ಕೆ ಬಂದಿರುವ ತಾಪಂನ ನೂತನ ಅಧ್ಯಕ್ಷರ ಮೇಲ್ಮನವಿಯನ್ನು ದಾಖಲಿಸಿ ಸುಮಾರು 5 ತಿಂಗಳಾದರೂ ಕ್ರಮ ಕೈಗೊಂಡಿಲ್ಲ, ಇನ್ನಾದರೂ ನ್ಯಾಯ ಕೊಡಿಸಿ ಎಂದು ಬೇಡಿದರು.
ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಲಕ್ಷ್ಮಿಕಾಂತರಡ್ಡಿ ಇದ್ದಾರೆ.