ವಿಜಯಪುರ: ರಾಜ್ಯದಲ್ಲಿ ಮಕ್ಕಳ ಕಳ್ಳರ ಹಾವಳಿಯ ವದಂತಿ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಹಿಡಿದ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಗ್ಯಾಂಗ್ ಬಾವಡಿ ಪರಿಸರದಲ್ಲಿ ಅಪರಿಚಿತ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಉತ್ತರ ಭಾರತದ ಶೈಲಿಯಲ್ಲಿ ಮಾತನಾಡಿದ್ದು, ಅನುಮಾನದ ಬಂದ ಸ್ಥಳೀಯರು, ಮಕ್ಕಳ ಕಳ್ಳರೆಂದು ಶಂಕಿಸಿ, ಸಾರ್ವಜನಿಕರ ಸಹಕಾರದಿಂದ ನಾಲ್ವರನ್ನೂ ಹಿಡಿದು ಥಳಿಸಿದ್ದಾರೆ.
ನಗರಕ್ಕೆ ಉತ್ತರ ಭಾರತದಿಂದ ಮಕ್ಕಳ ಕಳ್ಳರು ಬಂದಿದ್ದಾರೆ, ಸೆರೆ ಸಿಕ್ಕಿದ್ದಾರೆ ಎಂದೆಲ್ಲ ಸುದ್ದಿ ಹರಡುತ್ತಲೇ ನಗರದ ಸಾವಿರಾರು ಸಂಖ್ಯೆಯ ಜನರು ಗ್ಯಾಂಗ್ ಬಾವಡಿ ಪ್ರದೇಶಕ್ಕೆ ಧಾವಿಸಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಗಾಂಧಿಚೌಕ್ ಪೊಲೀಸರು, ನಾಲ್ವರನ್ನೂ ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ತಮ್ಮ ವಶದಲ್ಲಿರುವ ನಾಲ್ವರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಜಮಾಯಿಸಿದ ಜನರನ್ನು ಚದುರಿಸಲು ಪೊಲೀಸರ ಹರ ಸಾಹಸ ಪಟ್ಟಿದ್ದಾರೆ.
ಈ ಮಧ್ಯೆ ಪೊಲೀಸರು ನಡೆಸಿದ ಪ್ರಾಥಮಿಕ ಹಂತದ ತನಿಖೆಯಲ್ಲಿ ನಾಲ್ವರೂ ಶಂಕಿತರು, ತಾವು ದೆಹಲಿ ಮೂಲದವರಾಗಿದ್ದು, ಅಲಂಕಾರಿಕ ಪ್ಲಾಸ್ಟಿಕ್ ಹೂವು ಮಾರಾಟ ಮಾಡಲು ನಗರಕ್ಕೆ ಬಂದವರು. ನಗರದಲ್ಲಿ ಕಳೆದ ಒಂದು ತಿಂಗಳಿಂದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾಗಿ ಮಾಹಿತಿ ನೀಡಿದ್ದಾರೆ. ಶಂಕಿತರು ನೀಡಿರುವ ಮಾಹಿತಿ ಆಧರಿಸಿ ಪೊಲೀಸರು ಮನೆ ಬಾಡಿಗೆ ನೀಡಿರುವ ಮಾಲೀಕರು ಹಾಗೂ ಅಕ್ಕಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.