Advertisement
ಉಪ್ಪೂರಿನ ಕಾಷ್ಠಶಿಲ್ಪಿ ಹರೀಶ ಗುಡಿಗಾರ್ ಬೆಂಗಳೂರಿನ ಸಂಸ್ಥೆ ಯೊಂದರಲ್ಲಿ ನೌಕರಿ ಮಾಡುತ್ತಿದ್ದಾಗ ಮಲ್ಲೇಶ್ವರದ ಸ್ಟೇಟ್ ಬ್ಯಾಂಕ್‌ನಲ್ಲಿ ಎಸ್‌ಬಿ ಖಾತೆ ಹೊಂದಿದ್ದರು. ದುಡಿದ ಹಣವನ್ನು ಠೇವಣಿ ಇರಿಸಿದ್ದರು. 2019ರ ಫೆಬ್ರವರಿಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಬಂದವರು ಉಡುಪಿಯಲ್ಲಿ ಅಂಗಡಿ ತೆರೆದು ಕಾಷ್ಠಶಿಲ್ಪ ಕೃತಿಗಳ ಮಾರಾಟದಲ್ಲಿ ತೊಡಗಿಸಿಕೊಂಡರು. ಬೆಂಗಳೂರಿನ ಬ್ಯಾಂಕ್ ಖಾತೆಯನ್ನು ಸಂತೆಕಟ್ಟೆಯ ಶಾಖೆಗೆ ವರ್ಗಾಯಿಸಿಕೊಂಡರು. ಈ ನಡುವೆ 2019ರ ಆ. 23ರಂದು ಹರೀಶ್ ಮೊಬೈಲ್‌ಗೆ 5,00,010 ರೂ. ವರ್ಗಾವಣೆಯಾಗಿದೆ ಎಂದು ಸಂದೇಶ ಎರಡು ಬಾರಿ ಬಂದಿತ್ತು. ಅವರು ಹಲವು ಸಮಯದಿಂದ ಬ್ಯಾಂಕಿಂಗ್ ವ್ಯವಹಾರವನ್ನೇ ಮಾಡಿರಲಿಲ್ಲ; ಚೆಕ್ ಕೂಡ ನೀಡಿರಲಿಲ್ಲ. ಅಲ್ಲದೆ ಎಸ್‌ಬಿ ಖಾತೆಯಲ್ಲಿ ಅಷ್ಟೊಂದು ಹಣವೂ ಇರಲಿಲ್ಲ. ಆದರೂ ನೋಡೋಣ ಎಂದುಕೊಂಡು ಲ್ಯಾಪ್‌ಟಾಪ್ ತೆರೆದು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಎಂಟ್ರಿಗಳು ದಾಖಲಾಗಿರುವುದು ಕಂಡುಬಂದಿತು.
Related Articles
Advertisement
ಬ್ಯಾಂಕ್ ಮ್ಯಾನೇಜರ್‌ರನ್ನು ಸಂಪರ್ಕಿಸಿದ ಹರೀಶ್ ಎಲ್ಲ ವಿವರಗಳನ್ನು ಲಿಖೀತವಾಗಿ ನೀಡಿದರು. ಪರಿಶೀಲಿಸಿದ ಅವರು ಹೊಸದಿಲ್ಲಿ ಬ್ಯಾಂಕನ್ನು ಸಂಪರ್ಕಿಸಿದರು. “ಹಣ ವರ್ಗಾಯಿಸಲ್ಪಟ್ಟ ಖಾತೆಯಲ್ಲಿದ್ದ ಹಣವನ್ನು ಬ್ಲಾಕ್ ಮಾಡಿಸಿದ್ದೇವೆ. ನಿಮ್ಮ ಹಣ ಭದ್ರವಾಗಿದ್ದು, ಇನ್ನೆರಡು ದಿನಗಳಲ್ಲಿ ಮರಳಿಸಲಾಗುವುದು’ ಎಂಬ ಭರವಸೆ ನೀಡಿದರು.
ದೀರ್ಘಾವಧಿ ಇರಿಸಿದ್ದ ಹಣದ ಮೂಲ ರಶೀದಿಗಳು ಹರೀಶ್ ಅವರಲ್ಲಿ ಇದ್ದವು. ಆದರೆ ಹಣ ವರ್ಗಾವಣೆಯಾಗಿರುವುದು ಹೇಗೆ ಎಂದು ವಿವರಿಸಲು ಮ್ಯಾನೇಜರ್ ನಿರಾಕರಿಸಿದ್ದರು. ಅವರ ಸೂಚನೆ ಯಂತೆ ಸೈಬರ್ ಪೊಲೀಸರಿಗೆ ದೂರು ನೀಡಲಾಯಿತು.
ಎಫ್ಐಆರ್ ದಾಖಲು:
ಮರುದಿನವೇ ಪೊಲೀಸರು ಕೋರ್ಟ್‌ಗೆ ಎಫ್ಐಆರ್ ಸಲ್ಲಿಸಿದ್ದರು. ಎರಡು ದಿನಗಳ ಅನಂತರವೂ ಖಾತೆಗೆ ಹಣ ಜಮೆಯಾಗದಿದ್ದಾಗ ಹರೀಶ್ ಪ್ರತೀ ದಿನ ಬ್ಯಾಂಕ್‌ಗೆ ಹೋಗಿ ವಿಚಾರಿಸತೊಡಗಿದರು. ಬ್ಯಾಂಕ್‌ನ ಹಿರಿಯ ಅಧಿಕಾರಿ ಪ್ರಜ್ಞಾ ಕಾಮತ್ ಅವರಿಗೆ ಹಾಗೂ ಸೈಬರ್ ಪೊಲೀಸರಿಗೆ ಮತ್ತೆ ದೂರು ನೀಡಿದರು. ಸಮಸ್ಯೆ ಬಗೆಹರಿಯದಿದ್ದಾಗ ಬಳಕೆದಾರರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು ಎಂದು ಶಾನುಭಾಗ್ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹರೀಶ್, ಪತ್ನಿ ವಿನುತಾ, ಪುತ್ರಿ ಉಪಸ್ಥಿತರಿದ್ದರು.
ಮತ್ತೂಮ್ಮೆ ಕೋರ್ಟ್‌ಗೆ ಮನವಿ :
ಘಟನೆ ನಡೆದು 8 ತಿಂಗಳ ಅನಂತರ ಮ್ಯಾನೇಜರ್ ಖಾತೆಯ ವಿವರಗಳನ್ನು ಲಿಖೀತವಾಗಿ ನೀಡಿದರು. ಸ್ಟೇಟ್ ಬ್ಯಾಂಕ್‌ನ ಹೊಸದಿಲ್ಲಿ ಶಾಖೆಯ “ಒನ್ 97 ಕಮ್ಯೂನಿಕೇಷನ್’ ಸಂಸ್ಥೆಗೆ ಸೇರಿದ ಖಾತೆ ಅದಾಗಿತ್ತು. ಹಣ ಲಪಟಾಯಿಸಿದವರ ಖಾತೆಯ ಸಂಖ್ಯೆ, ಖಾತೆದಾರರ ಹೆಸರು, ವಿಳಾಸಗಳನ್ನು ತಿಳಿದ ಅನಂತರವೂ ಕ್ರಮ ತೆಗೆದುಕೊಳ್ಳದಿದ್ದಾಗ 2020ರ
ಜ. 27ರಂದು ಬಳಕೆದಾರರ ನ್ಯಾಯಾಲಯದಲ್ಲಿ ದೂರು ನೀಡಿದರು. 16 ತಿಂಗಳು ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶರು ತೀರ್ಪು ನೀಡಿ, ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್‌ನವರ ಸೇವಾ ನ್ಯೂನತೆ ಮತ್ತು ನ್ಯಾಯ ಸಮ್ಮತವಲ್ಲದ ವ್ಯವಹಾರ ಮಾಡಿರುವುದರಿಂದ ಅಮಾಯಕ ಬಳಕೆದಾರ ಕಳೆದುಕೊಂಡ 5.5 ಲ.ರೂ.ಗಳನ್ನು ಹಿಂದಿರುಗಿಸುವಂತೆಯೂ ಆ ಮೊತ್ತಕ್ಕೆ ಶೇ. 10 ಬಡ್ಡಿ, 50 ಸಾವಿರ ರೂ. ಪರಿಹಾರ, ಕೋರ್ಟ್ ವೆಚ್ಚಗಳಿಗೆ ಮಾಡಲಾದ 10 ಸಾವಿರ ರೂ. ನೀಡುವಂತೆ ಆದೇಶಿಸಿದರು. ತೀರ್ಪು ಪ್ರಕಟವಾಗಿ 40 ದಿನಗಳು ಕಳೆದರೂ ಹರೀಶ್‌ಗೆ ಹಣ ಪಾವತಿಯಾಗಿಲ್ಲ. ಈ ತೀರ್ಪಿನ ಅನುಷ್ಠಾನಕ್ಕಾಗಿ ಮತ್ತೂಮ್ಮೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ರವೀಂದ್ರನಾಥ ಶಾನುಭಾಗ್ ಅವರು ತಿಳಿಸಿದರು.