ಉಡುಪಿ: ನಗರಸಭಾ ವ್ಯಾಪ್ತಿಯ ಬ್ರಹ್ಮಗಿರಿ ಸರ್ಕಲ್‌ನ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮೀನಿನ ಗೂಡಂಗಡಿಯನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಪುರುಷರು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ತೊಂದರೆ ಮಾಡಿರುವುದರ ಜತೆಗೆ ನಗರಸಭೆ ಆರೋಗ್ಯ ನಿರೀಕ್ಷಕರ ಮೇಲೆ ದಲಿತ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುವ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಗಿರಿ ಸರ್ಕಲ್‌ನಲ್ಲಿ ಅಧಿಕೃತವಾಗಿ ಗೂಡಂಗಡಿ ಸ್ಥಾಪಿಸಿ ಮೀನಿನ ವ್ಯಾಪಾರ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರದೇಶವನ್ನು ತೆರವುಗೊಳಿಸಲು ಅಧಿಕಾರಿಗಳಿ ಮೌಖಿಕ ಆದೇಶ ನೀಡಿದ್ದರು.
ಪೊಲೀಸರ ಉಪಸ್ಥಿತಿಯಲ್ಲಿ ಗೂಡಂಗಡಿಯ ತೆರವು ಕಾರ್ಯಾಚರಣೆಯನ್ನು ಮಾಡುತ್ತಿರುವ ವೇಳೆ ಈ ಕಾರ್ಯಾಚರಣೆಗೆ ಕಾಡಬೆಟ್ಟು ನಿವಾಸಿಗಳಾದ ರಾಧಾ, ಅಶೋಕ್, ಪ್ರಮೋದಾ, ಸುಹೈಲ್ ಹಾಗೂ ಅವರ ಸಹಚರರು ಸರಕಾರಿ ಕೆಲಸಕ್ಕೆ ಅಡ್ಡಿಸಿದ್ದಾರೆ ಎಂದು ದೂರಲಾಗಿದೆ.
ಘಟನೆಯ ಬಗ್ಗೆ ಪ್ರತಿದೂರು:
ಉಡುಪಿ: ನಗರಸಭೆ ಆರೋಗ್ಯ ನಿರೀಕ್ಷ ಕರುಣಾಕರ್ ಅವರು ಜಾತಿನಿಂದನೆ ಹಾಗೂ ಜೆಸಿಬಿಯಿಂದ ಗೂಡಂಗಡಿ ತೆರವುಗೊಳಿಸಲು ಯತ್ನಿಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಗಿರಿ ಸರ್ಕಲ್ ಬಳಿ ತಗಡಿನ ಅಂಗಡಿಯಲ್ಲಿ ಒಂದು ತಿಂಗಳಿನಿಂದ ಮೀನು ಮಾರಾಟವನ್ನು ಮಾಡುತ್ತಿದ್ದ ಪ.ಜಾತಿ ಸೇರಿದ ರಾಧಾ ಅಶೋಕ್‌ರಾಜ್ ಅವರಿಗೆ ಆರೋಗ್ಯ ನಿರೀಕ್ಷಕ ಜಾತಿ ನಿಂದನೆ ಮಾಡಿರುವುದರ ಜತೆಗೆ ಅಂಗಡಿಯನ್ನು ಕೆಡವಲು ಪ್ರಯತ್ನಿಸಿದ್ದು, ಅಂಗಡಿಯ ಹಿಂಭಾಗಕ್ಕೆ ಹಾನಿಯಾಗಿದೆ ಎಂದು ದೂರು ದಾಖಲಾಗಿದೆ.