Advertisement

ಆಕಳು ಸಾವು: ಹುಲಿಯ ದಾಳಿ ಶಂಕೆ?

05:21 PM Feb 06, 2022 | Suhan S |

ಸಾಗರ: ತಾಲೂಕಿನ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳ್ಳಣ್ಣೆ ಗ್ರಾಮದ ಜವಸತಿ ಪ್ರದೇಶದಲ್ಲಿ ಹುಲಿಯ ಸಂಚಾರ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದ ಗಿಳಿಗಾರಿನಲ್ಲಿ ಊರ ಮಧ್ಯಭಾಗದಲ್ಲಿಯೇ ಶನಿವಾರ ರಾತ್ರಿ ಆಕಳನ್ನು ಹುಲಿ ಕೊಂದು, ಎದೆಗುಂಡಿಗೆ, ಕೆಚ್ಚಲನ್ನು  ತಿಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

Advertisement

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹುಲಿ ಸಂಚಾರ ಸಂಚರಿಸುತ್ತಿದೆ ಎನ್ನುವ ಮಾತು ವ್ಯಾಪಕ ಚರ್ಚೆಯಲ್ಲಿದೆ. ಇತ್ತೀಚೆಗೆ ಕೊಳಚಗಾರಿನ ಸೊಪ್ಪಿನಬೆಟ್ಟದಲ್ಲಿ ಮೇಯುತ್ತಿದ್ದ ದನವನ್ನು ಹಾಡುಹಗಲೇ ಹುಲಿ ಕಚ್ಚಿ ತಿಂದಿದೆ. ಬೆಳ್ಳಣ್ಣೆ ಭಾಗದಲ್ಲಿ ಕೆಲವು ನಾಯಿಗಳು ಕಣ್ಮರೆಯಾಗಿದೆ. ಗಿಳಿಗಾರಿನಲ್ಲಿ ಸುಬ್ಬಗೌಡರ ಮನೆಯ ಸುಮಾರು 10 ಸಾವಿರ ರೂ. ಬೆಲೆ ಬಾಳುವ ಆಕಳನ್ನು ಊರ ಮಧ್ಯದ ರಸ್ತೆಯಲ್ಲಿ ಕಚ್ಚಿ ತಿಂದಿರುವುದು ಈಗ ತಾಳಗುಪ್ಪ ವ್ಯಾಪ್ತಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ.

ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಅರಣ್ಯ ಇಲಾಖೆಯ ವೀಕ್ಷಕ ಹಾಗೂ ಅರಣ್ಯ ರಕ್ಷಕ ಲೋಕೇಶ್, ಪಶು ವೈದ್ಯಾಧಿಕಾರಿಗಳನ್ನು ಕರೆದೊಯ್ದು  ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆಕಳು ಸಾವಿಗೆ ಕಾರಣ ಏನು ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಗೊತ್ತಾಗಲಿದೆ.

ಊರಿನಲ್ಲಿ ಹುಲಿಯ ಸಂಚಾರದ ಮಾಹಿತಿ ತಿಳಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ವನಪಾಲಕ ಸಂತೋಷಕುಮಾರ ಅದನ್ನು ಅಲ್ಲಗಳೆದು ಬೆಳ್ಳಣ್ಣೆ ಗುಡ್ಡದಲ್ಲಿ ಕ್ಯಾಮರಾ ಇರಿಸಿ, ಅಲ್ಲಿ ಸಂಚರಿಸುತ್ತಿರುವುದು ಚಿರತೆಯೋ, ಹುಲಿಯೋ ಎಂಬುವುದನ್ನು ಪರಿಶೀಲಿಸಲಾಗುತ್ತಿದೆ. ಗಿಳಿಗಾರಿನಲ್ಲಿ ದನ ಹಿಡಿದಿದ್ದು ಹುಲಿಯೋ ಚಿರತೆಯೋ ಎಂಬುದು ಮರಣೋತ್ತರ ಪರೀಕ್ಷಾ ವರದಿಯಿಂದ  ತಿಳಿಯಬೇಕಿದೆ. ಮಹಜರ್ ಕ್ರಮ ಜರುಗಿಸಿ ದನದ ಮಾಲಿಕರಿಗೆ ನಿಗದಿತ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next