ಪುತ್ತೂರು: ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಮೇಸ್ತ್ರಿಗೆ ಸಹಾಯಕನಾಗಿ ಕೆಲಸ ನಿರ್ವಹಿಸಲೆಂದು ವೃದ್ಧರೋರ್ವರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದು ಸಂಜೆ ವೇಳೆ ಮೇಸ್ತ್ರಿಯು ಅವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಮಲಗಿಸಿ ಹೋಗಿದ್ದಾರೆ ಎಂಬ ಆರೋಪವೊಂದು ಸಾಲ್ಮರದಲ್ಲಿ ಕೇಳಿ ಬಂದಿದೆ.
ಚಿಕ್ಕಮುಟ್ನೂರು ಗ್ರಾಮದ ಸಾಲ್ಮರದ ಕೆರೆಮೂಲೆ ನಿವಾಸಿ ಶಿವಪ್ಪ (70) ಮೃತರು. ಅವರು ಸಾಲ್ಮರ ಕೆರೆಮೂಲೆ ನಿವಾಸಿ ವುಡ್ ಸಂಸ್ಥೆಯೊಂದರ ಮಾಲಕ ಹೆನ್ರಿ ತಾವ್ರೋ ಜತೆಗೆ ನ. 16ರಂದು ಕೆಲಸಕ್ಕೆ ತೆರಳಿದ್ದರು. ಬೆಳಗ್ಗೆ ಸ್ಟಾನಿ ಎಂಬಾತ ಇವರನ್ನು ಕರೆದುಕೊಂಡು ಹೋಗಿದ್ದರು. ಆದರೆ ಸಂಜೆ ವೇಳೆ ಶಿವಪ್ಪ ಅವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಬಿಟ್ಟು ತೆರಳಿದ್ದಾರೆ ಎಂದು ಮನೆ ಮಂದಿ, ಸ್ಥಳೀಯರು ಆರೋಪಿಸಿದ್ದಾರೆ.
ಶಿವಪ್ಪ ಅವರು ಹೆನ್ರಿಯೊಂದಿಗೆ ಪುತ್ತೂರಿನ ಹೊರಭಾಗದಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದ ವೇಳೆ ಅಸೌಖ್ಯಕ್ಕೆ ಒಳಗಾಗಿದ್ದು ಈ ವೇಳೆ ಮೇಸ್ತ್ರಿ ಅವರನ್ನು ನೇರವಾಗಿ ಮನೆಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗದೆ ನೇರವಾಗಿ ಮನೆಗೆ ಕರೆದುಕೊಂಡು ಬಂದ ಹೆನ್ರಿ ವಿರುದ್ಧ ಮನೆಯವರು ಅಸಮಾಧಾನ ವ್ಯಕ್ತಪಡಿಸಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾವಿನ ಬಗ್ಗೆ ಅನುಮಾನ:
ಮನೆ ಮಂದಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಮೃತದೇಹವನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಮೃತರ ಅಳಿಯ ಶಶಿ ಕೆರೆಮೂಲೆ ಹೇಳುವ ಪ್ರಕಾರ, ಶಿವಪ್ಪ ಅವರನ್ನು ಹೆನ್ರಿ ಅವರು ಕೆಲವೊಮ್ಮೆ ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದುದು ಶನಿವಾರವೂ ಹೋಗಿದ್ದರು. ಆದರೆ ಸಂಜೆ ವೇಳೆ ಹೆನ್ರಿ ಅವರ ಪಿಕಪ್‌ನ ಹಿಂಭಾಗದಲ್ಲಿ ಮಲಗಿಸಿಕೊಂಡು ಬಂದಿದ್ದು ಮನೆ ಸಂಪರ್ಕದ ರಸ್ತೆ ಬಳಿಯಲ್ಲೇ ಮೃತದೇಹವನ್ನು ಮಲಗಿಸಿ ಹೋಗಿದ್ದಾರೆ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದರು. ಈ ಬಗ್ಗೆ ವಿಚಾರಿಸಿದಾಗ ಅಸೌಖ್ಯಕ್ಕೆ ಒಳಗಾಗಿದ್ದ ಕಾರಣ ಮನೆಗೆ ತಂದು ಬಿಟ್ಟಿದ್ದೇನೆ. ಆಗ ಅವರು ಮೃತಪಟ್ಟಿರಲಿಲ್ಲ ಎಂದು ಹೆನ್ರಿ ಹೇಳುತ್ತಿದ್ದು ಇದು ಸುಳ್ಳಾಗಿದೆ. ಈ ಸಾವಿನ ಬಗ್ಗೆ ನಮಗೆ ಅನುಮಾನ ಇದ್ದು ನಗರ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದಿದ್ದಾರೆ.