ಪಾಂಡವಪುರ: ಪಟ್ಟಣದ ಚಂದ್ರೆ ಬಡಾವಣೆಯಲ್ಲಿ ಗೃಹಿಣಿಯೋರ್ವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ದೊರಕಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ತಮ್ಮ ಮಗಳನ್ನು ಆಕೆ ಗಂಡ, ಮಾವ, ಅತ್ತೆ ಹಾಗೂ ಮೈದುನ ಸೇರಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿ ಮೃತ ಯುವತಿ ತಾಯಿ ಶೈಲಜಾಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಟ್ಟಣದ ಚಂದ್ರೆ ಬಡಾವಣೆ ನಿವಾಸಿ ಕಾರ್ತಿಕ್ ಅವರ ಪತ್ನಿ ರಕ್ಷಿತಾ (21) ಎಂಬಾಕೆಯೇ ಕೊಲೆಯಾಗಿರುವ ಗೃಹಿಣಿ. ಪತಿ ಕಾರ್ತಿಕ್, ಮಾವ ಶಂಭುಗೌಡ, ಅತ್ತೆ ಜಲಜಾ ಹಾಗೂ ಮೈದುನ ಅಭಿ ಅಲಿಯಾಸ್ ಅಭಿಷೇಕ್ ಕೊಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಶೈಲಜಾ ಕೋಂ ಲೇಟ್ ಲೋಕೇಶ್ ಪುತ್ರಿ ರಕ್ಷತಾಳನ್ನು 2019ರಲ್ಲಿ ಹರಳಹಳ್ಳಿಯ ಶಂಭೂಗೌಡರ ಪುತ್ರ ಕಾರ್ತಿಕ್ ಪ್ರೀತಿಸಿ ವಿವಾಹವಾಗಿದ್ದ ಎಂದು ಹೇಳಲಾಗಿದೆ.
ರಕ್ಷಿತಾ ಹಾಗೂ ಕಾರ್ತಿಕ್ ಅವರಿಗೆ ಮೌನಿತಾ ಎಂಬ ಎರಡು ವರ್ಷದ ಮಗಳಿದ್ದಾಳೆ. ರಕ್ಷಿತಾಳನ್ನು ಮದುವೆಯಾದ 6 ತಿಂಗಳ ಬಳಿಕ ಪತಿ ಕಾರ್ತಿಕ್ ಜಾತಿನಿಂದನೆ ಮಾಡಿ ಬೈಯ್ಯುತ್ತಿದ್ದನೆಂದು ಆಕೆ ನನಗೆ ತಿಳಿಸಿದ್ದಳು. ಈ ಸಂಬಂಧ ರಕ್ಷಿತಾಳಿಗೆ ಸಮಾಧಾನ ಹೇಳಲಾಗಿತ್ತು. ಇದಾದ ಬಳಿಕ ಮಂಗಳವಾರ ಮಧ್ಯರಾತ್ರಿ (ಫೆ.8ರಂದು) ಸುಮಾರು ಪತಿ ಕಾರ್ತಿಕ್, ಮಾವ ಶಂಭುಗೌಡ, ಅತ್ತೆ ಜಲಜಾ ಹಾಗೂ ಮೈದುನ ಅಭಿ ಅಲಿಯಾಸ್ ಅಭಿಷೇಕ್, ನನ್ನ ಮಗಳಿಗೆ ಹೊಡೆದು ಕೊಲೆ ಮಾಡಿ ನೇಣು ಹಾಕಿದ್ದಾರೆ.
ತಾಯಿ ಶೈಲಜಾ ದೂರು: ದೂರವಾಣಿ ಮೂಲಕ ಅಕ್ಕಪಕ್ಕದವರು ವಿಚಾರ ತಿಳಿಸಿದ್ದರಿಂದ ಚಂದ್ರೆ ಬಡಾವಣೆ ಮನೆ ಹತ್ತಿರ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಇರುತ್ತಾಳೆ. ಮನೆಯಲ್ಲಿ ಗಲಾಟೆಯಾಗಿ ರಕ್ತದ ಕಲೆಗಳಿದ್ದು, ಮಗಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿ ಜಾತಿನಿಂದನೆ ಮಾಡಿ ಹೊಡೆದು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ರಕ್ಷಿತಾಳ ತಾಯಿ ಶೈಲಜಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಳಿಯ ಕಾರ್ತಿಕ್, ಶಂಭುಗೌಡ, ಜಲಜಾ, ಅಭಿ ಅಲಿಯಾಸ್ ಅಭಿಷೇಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪಾಂಡವಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪಟ್ಟಣದ ಉಪವಿಭಾಗಿಯ ಆಸ್ಪತ್ರೆ ಶವಾಗಾರದಲ್ಲಿ ಗೃಹಿಣಿ ರಕ್ಷಿತಾಳ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವ ಒಪ್ಪಿಸಲಾಗಿದೆ.