ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 48ರ ಸೊಂಡೆಕೊಪ್ಪ ಬೈಪಾಸ್ ಬಳಿ ನಿರ್ಮಿಸಿರುವ ಮೇಲ್ಸೇತುವೆಯಿಂದ 30 ಅಡಿ ಕೆಳಗೆ ಬಿದ್ದ ಕೆಟಿಎಂ ಬೈಕ್ ಸವಾರ, ಮೃತಪಟ್ಟ ಘಟನೆ ನೆಲಮಂಗಲ ನಗರ ವ್ಯಾಪ್ತಿ ಯಲ್ಲಿ ನಡೆದಿದೆ.
ವೀರೇಂದ್ರ (25) ಮೃತ ಬೈಕ್ ಸವಾರ. ಈತ, ಮೂಲತಃ ರಾಯಚೂರು ಮೂಲದವನಾಗಿದ್ದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕೈ-ಕಾಲಿಗೆ ಗಂಭೀರ ಗಾಯ: ತುಮಕೂರು ಮಾರ್ಗದಿಂದ ಬೆಂಗಳೂರು ಕಡೆಗೆ ಹೋಗುವಾಗ ಕೆಟಿಎಂ ಬೈಕ್‌ನಲ್ಲಿ ವೇಗವಾಗಿ ಬಂದಿದ್ದು ನಿಯಂತ್ರಣ ತಪ್ಪಿ ಸೊಂಡೆಕೊಪ್ಪ ಬೈಪಾಸ್ ಬಳಿಯ ಹೆದ್ದಾರಿ ಮೇಲ್ಸೇತುವೆ ರಸ್ತೆಯ ನಡುವೆ ಬಿಡಲಾಗಿರುವ ಜಾಗದಿಂದ 30ಅಡಿಯಷ್ಟು ಕೆಳಗೆ ಬಿದ್ದಿದ್ದಾನೆ. ಈ ವೇಳೆ ಮೇಲ್ಸೇತುವೆ ಕೆಳಗಿದ್ದ ಆಂಜ ನೇಯ ಸ್ವಾಮಿ ದೇವಾಲಯದ ಮೇಲೆ ಕೆಟಿಎಂ ಬೈಕ್ ಬಿದ್ದಿದ್ದರೆ ಅಲ್ಲಿಂದ 100ಮಿ ದೂರದಲ್ಲಿ ಬೈಕ್ ಸವಾರ ಬಿದ್ದಿದ್ದಾನೆ.
ಘಟನೆಯಲ್ಲಿ ಬೈಕ್ ಸವಾರನಿಗೆ ಕಾಲು, ತಲೆ ಭಾಗಕ್ಕೆ ಗಂಭೀರ ಗಾಯವಾಗಿ ಹೆಚ್ಚು ರಕ್ತಸ್ರಾವವಾಯಿತು. ತಕ್ಷಣ ಸ್ಥಳೀ ಯರು ಪಕ್ಕದಲ್ಲಿಯೇ ಇದ್ದ ಹರ್ಷ ಆಸ್ಪತ್ರೆಗೆ ಸೇರಿಸಿದ್ದು ಆಸ್ಪತ್ರೆಗೆ ಹೋದ ನಂತರ ಮೃತನಾಗಿದ್ದಾನೆ. ಪ್ರಕರಣ ನೆಲಮಂಗಲ ಸಂಚಾರ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದೆ.
ಸಂಚಾರ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ 48ರ ಎರಡು ಕಡೆ ರಸ್ತೆ ಹಾಗೂ ಮೇಲ್ಸೇತುವೆ ಕೆಳಗಿನ ನಾಲ್ಕು ಸರ್ವಿಸ್ ರಸ್ತೆಗಳು ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ 3-4ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸ ಪಟ್ಟರು.