ಉಳ್ಳಾಲ: ಮುಡಿಪು ಬಳಿ ಐಟಿ ಸಂಸ್ಥೆಯೊಂದರ ಪ್ಲಂಬಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂಲ್ಕಿ ಕಿಲ್ಪಾಡಿ ಎಣ್ಣೆಗೇಣಿ ನಿವಾಸಿ ರಾಜೇಶ್ ದೇವಾಡಿಗ (32) ಅವರು ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎಂಟು ವರ್ಷಗಳಿಂದ ಸಂಸ್ಥೆಯ ಪ್ಲಂಬಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮಂಗಳವಾರ ಸಂಜೆ ಖಾಲಿ ಇರುವ ಕಟ್ಟಡಕ್ಕೆ ತೆರಳಿದ್ದು, ವಾಪಸ್ ಬಂದಿರಲಿಲ್ಲ. ಬುಧವಾರ ಬೆಳಗ್ಗೆ ಕಟ್ಟಡದಿಂದ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಗಾರ್ಡನ್ ಕೆಲಸದಲ್ಲಿ ಪ್ಲಂಬಿಂಗ್ ಮಾಡುತ್ತಿದ್ದ ರಾಜೇಶ್‌ಗೆ ನಿರ್ಮಾಣ ಹಂತದ ಕಟ್ಟಡದಲ್ಲಿದ್ದವರು 3.15ಕ್ಕೆ ಕರೆ ಮಾಡಿದ್ದರು. ಬಳಿಕ ಕಟ್ಟಡದಲ್ಲಿದ್ದವರು 4 ಗಂಟೆಯೊಳಗೆ ಕೆಲಸ ಮುಗಿಸಿ ಕಟ್ಟಡದಿಂದ ಹೊರಗೆ ಬಂದಿದ್ದರು. ಆದರೆ ರಾಜೇಶ್ 4 ಗಂಟೆಯ ಬಳಿಕ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಕಟ್ಟಡದ ಒಳಗೆ ತೆರಳುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳಿಕ ಹೊರಗೆ ಬಂದಿರಲಿಲ್ಲ. ಸಂಜೆ ಎಲ್ಲರೂ ಕೆಲಸ ಮುಗಿಸಿ ತೆರಳಿದ್ದು, ಪ್ರತೀ ದಿನ ಒಟ್ಟಿಗೆ ಹೋಗುವ ಸಿಬಂದಿ ರಾಜೇಶ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಈ ಸಂದರ್ಭದಲ್ಲಿ ರಾಜೇಶ್ ತೆರಳಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಹ ಸಿಬಂದಿ ಮನೆಗೆ ತೆರಳಿದ್ದರು. ರಾತ್ರಿ ಸೆಕ್ಯುರಿಟಿಯವರಿಗೆ ಒಳಗೆ ಹೋಗಿರುವ ಒಬ್ಬ ವ್ಯಕ್ತಿ ಹೊರಗೆ ಬಾರದೆ ಇರುವುದು ಗೊತ್ತಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು. ಇದೇ ಸಂದರ್ಭ ಕತ್ತಲಾದರೂ ರಾಜೇಶ್ ಮನೆಗೆ ವಾಪಸ್ ಬಾರದಿರುವ ಕುರಿತು ಕರೆ ಬಂದಿತ್ತು. ಕೂಡಲೇ ಸಂಸ್ಥೆಯ ಸಿಬಂದಿ ಬಂದು ಸಿಸಿಟಿವಿ ಆಧಾರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಹುಡುಕಾಡಿದ್ದರು.
ಆದರೆ ರಾತ್ರಿ ಸಮಯವಾದ್ದರಿಂದ ಏನೂ ತಿಳಿದಿರಲಿಲ್ಲ. ಮರುದಿನ ಬೆಳಗ್ಗೆ ಪೊಲೀಸರ ಸಮ್ಮುಖದಲ್ಲಿ ಹುಡುಕಾಡಿದಾಗ ಮೊದಲ ಮಹಡಿಯ ಪೈಪ್‌ಲೈನ್ ಎಳೆಯುವ ಖಾಲಿ ಜಾಗದಲ್ಲಿ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಇದೇ ಸ್ಥಳದಲ್ಲಿ ಅವರ ಮೊಬೈಲ್ ಕೂಡ ಬಿದ್ದಿತ್ತು. ಜಾರಿ ಬಿದ್ದು ಮೃತಪಟ್ಟಿರುವ ಸಾಧ್ಯತೆಯ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಆಗಮಿಸಿ ತನಿಖೆ ನಡೆಸಿದ್ದು ನಾಲ್ಕನೇ ಮಹಡಿಯಿಂದ ಬಿದ್ದು ತಲೆ ಮತ್ತು ಕೈ ಕಾಲಿಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿರುವ ಸಹೋ ದರನೊಂದಿಗೆ ಕೊನೆಯದಾಗಿ ರಾಜೇಶ್ ಮಾತನಾಡಿದ್ದಾಗಿ ತಿಳಿದುಬಂದಿದೆ. ಅವರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿ ದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.