Advertisement

ಮೂಡುಬಿದಿರೆ ಪರಿಸರದಲ್ಲಿ  ಸರಣಿ ದರೋಡೆ, ಕಳವು

02:18 AM Apr 01, 2021 | Team Udayavani |

ಮೂಡುಬಿದಿರೆ/ಕೈಕಂಬ: ಮಂಗಳೂರು – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮತ್ತು ಮೂಡುಬಿದಿರೆ ಪರಿಸರದಲ್ಲಿ ಮಂಗಳವಾರ ತಡರಾತ್ರಿ ವಾಹನಗಳನ್ನು ತಡೆದು ಸರಣಿ ದರೋಡೆ ಮತ್ತು ಕಳ್ಳತನ, ಕಳ್ಳತನಕ್ಕೆ ವಿಫ‌ಲ ಯತ್ನ ಪ್ರಕರಣಗಳು ನಡೆದಿವೆ.

Advertisement

ಪ್ರಕರಣ 1: ಬೈಕ್‌ ಅಪಹರಣ :

ಕಡಂದಲೆಯ ಬಿ.ಟಿ. ನಗರದಲ್ಲಿ ಮಂಗಳವಾರ ರಾತ್ರಿ ಸ್ಥಳೀಯ ರಾಜೇಶ್‌ ಅವರು ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರು ತೋರಿಸಿ ತಡೆದರು. ರಾಜೇಶ್‌ ಅವರ ಮುಖಕ್ಕೆ ಮೆಣಸಿನ ಪುಡಿ ಎರಚಿ ಅವರ ಅಂಗಿ ಕಿಸೆಯಲ್ಲಿದ್ದ 2 ಸಾವಿರ ರೂ. ನಗದು, ಮೊಬೈಲ್‌ ಫೋನನ್ನು ಕಸಿದುಕೊಂಡು ಬೈಕಿನೊಂದಿಗೆ ಪರಾರಿಯಾಗಿದ್ದಾರೆ. ಕಾರು ಚಾಲಕರಾಗಿರುವ ರಾಜೇಶ್‌ ಮಿತ್ರರೊಬ್ಬರನ್ನು ಬೈಕಿನಲ್ಲಿ ಬೆಳ್ಮಣ್ಣಿಗೆ ಬಿಟ್ಟು ಮನೆಗೆ ವಾಪಸಾಗುತ್ತಿದ್ದಾಗ ಘಟನೆ ನಡೆದಿದೆ.

ಪ್ರಕರಣ 2: ಆಮ್ನಿಗೆ ಹಾನಿಗೈದು ನಗದು ಕಳವು :

ಇನ್ನೊಂದು ಪ್ರಕರಣದಲ್ಲಿ ಮೂಡು ಬಿದಿರೆಯ ಪಶ್ಚಿಮ ಭಾಗದಲ್ಲಿರುವ ಗಾಂಧಿನಗರ ಕಡೆಪಳ್ಳದ ಹರಿಶ್ಚಂದ್ರ ನಾಯಕ್‌ ಅವರ ಅಂಗಳದಲ್ಲಿ ನಿಲ್ಲಿಸಿದ್ದ ಆಮ್ನಿ ಕಾರಿನ ಗಾಜು ಪುಡಿಗೈದು ಒಳಗಿದ್ದ 4 ಸಾವಿರ ರೂ. ನಗದನ್ನು ಕಳವು ಮಾಡಿದ್ದಾರೆ. ಬಳಿಕ ಮನೆಯ ಬಾಗಿಲನ್ನು ಕಾಲಿನಿಂದ ತುಳಿದು ಒಳನುಗ್ಗಲೆತ್ನಿಸಿದ್ದಾರೆ. ಸದ್ದು ಕೇಳಿ ಮನೆಯವರು ಎದ್ದು ವಿದ್ಯುತ್‌ ಬೆಳಕು ಹಾಕಿದಾಗ ಕಳ್ಳರು ಪರಾರಿಯಾದರು.

Advertisement

ಪ್ರಕರಣ 3: ಮನೆಗೆ ನುಗ್ಗುವ ಯತ್ನ :

ಮತ್ತೂಂದು ಪ್ರಕರಣದಲ್ಲಿ ತೋಡಾರಿನ ಅರುಣ್‌ ಅವರ ಮನೆಗೆ ಕಲ್ಲೆಸೆದು ಕಾಲಿನಿಂದ ಬಾಗಿಲಿಗೆ ತುಳಿದು  ಒಳನುಗ್ಗುವ ಪ್ರಯತ್ನ ನಡೆಸಿದ್ದಾರೆ. ಮನೆಯವರು ಎದ್ದು ಬೊಬ್ಬೆ ಹೊಡೆ ದಾಗ ಕಳ್ಳರು ಪರಾರಿಯಾಗಿದ್ದಾರೆ.

ಒಂದೇ ತಂಡದ ಕೃತ್ಯ? :

ಮೂಡುಬಿದಿರೆ ಪರಿಸರದಲ್ಲಿ ನಡೆದ ಬೈಕ್‌, ಮೊಬೈಲ್‌ ಅಪಹರಣ, ನಗದು ಲೂಟಿ, ಮನೆಯಿಂದ ಕಳ್ಳತನ, ಮತ್ತೂಂದು ಕಡೆ ಕಳ್ಳತನಕ್ಕೆ ವಿಫಲಯತ್ನ ಹಾಗೂ ಗುರುಪುರ ಅನೆಚಡವಿನಲ್ಲಿ ಕಾರನ್ನು ತಡೆದು ಇಬ್ಬರಿಗೆ ಹಲ್ಲೆಗೈದು ಮೊಬೈಲ್‌, ನಗದು ದೋಚಿದ ಪ್ರಕರಣಗಳಲ್ಲಿ ಸಾಮ್ಯತೆ ಇದ್ದು, ಒಂದೇ ತಂಡದ ಕೃತ್ಯ ಆಗಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸ್ಥಳಗಳಿಗೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಕಾರಿನಲ್ಲಿ ಬಂದಿರಬೇಕೆಂದು ಅಂದಾಜಿಸಲಾಗಿದ್ದು ಸುಮಾರು ನಾಲ್ಕೈದು ಮಂದಿ ಇದ್ದರೆನ್ನಲಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಕಾರಿಗೆ ನಕಲಿ ನಂಬರ್‌ಪ್ಲೇಟ್‌ ಅಳವಡಿಸಿರುವ ಶಂಕೆ ವ್ಯಕ್ತವಾಗಿದೆ.

ಗುರುಪುರ: ಕಾರು ತಡೆದು  ಹಲ್ಲೆಗೈದು ದರೋಡೆ :

ಕೈಕಂಬ: ನೀರುಮಾರ್ಗ  ಶಿಕ್ಷಣ ಸಂಸ್ಥೆಯಲ್ಲಿ  ಪ್ಲಂಬಿಂಗ್‌ ಕೆಲಸ  ಮುಗಿಸಿ ಬುಧವಾರ  ಮುಂಜಾನೆ 5 ಗಂಟೆ  ಸುಮಾರಿಗೆ ಮನೆಗೆ ತಮ್ಮ ಆಲ್ಟೋ ಕಾರಿನಲ್ಲಿ ಬರುತ್ತಿದ್ದ ಶಶಿಕಾಂತ್‌ ಮತ್ತು ರಿತೇಶ್‌ ಅವರನ್ನು ಮಂಗಳೂರು-ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಅನೆಚಡವಿನಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ.

ಶಶಿಕಾಂತ್‌ ಮತ್ತು ರಿತೇಶ್‌ ಅವರಿದ್ದ ಕಾರು ಗುರುಪುರ ಪೇಟೆ ದಾಟಿ ಆನೆಚಡಾವು ತಲಪುತ್ತಿದ್ದಂತೆ ಬಿಳಿ ಬಣ್ಣದ ಸ್ವಿಫ್ಟ್ ಕಾರೊಂದು ರಸ್ತೆಗೆ ಅಡ್ಡ ನಿಂತಿರುವುದನ್ನು ಕಂಡು ತಮ್ಮ ಕಾರನ್ನು ನಿಲ್ಲಿಸಿದರು. ಆ ಕಾರಿನಲ್ಲಿ ನಾಲ್ವರಿದ್ದು, ಒಬ್ಟಾತನು ಕೈಯಲ್ಲಿ ತಲವಾರು ಮತ್ತು ಇಬ್ಬರು ಮರದ ಬ್ಯಾಟ್‌  ಹಿಡಿದು ಕಾರಿನಿಂದ ಇಳಿದು ಬಂದರು. ಆಲ್ಟೋ ಕಾರಿನ ಮೇಲೆ ಮೆಣಸಿನಪುಡಿಯನ್ನು ಎರಚಿದ್ದಲ್ಲದೆ ಕಾರನ್ನು ಸುತ್ತುವರಿದು ತಲವಾರು ಮತ್ತು ಬ್ಯಾಟ್‌ಗಳಿಂದ ಕಾರಿನ ಎರಡೂ ಬದಿಯ ಮತ್ತು ಅಕ್ಕಪಕ್ಕದ ಗ್ಲಾಸ್‌ಗಳನ್ನು ಒಡೆದು ಹಾಕಿದರು. ಒಳಗಿದ್ದ ಶಶಿಕಾಂತ್‌ ಮತ್ತು ರಿತೇಶ್‌ ಅವರ ಅಂಗಿಯ ಕೊರಳಪಟ್ಟಿಯನ್ನು ಹಿಡಿದು ಎಳೆದಾಡಿ “ನಿಮ್ಮಲ್ಲಿ ಇರುವ ಹಣ ಮತ್ತು ಬೆಲೆಬಾಳುವ ಸೊತ್ತುಗಳನ್ನು ಕೊಡಿ ಇಲ್ಲದಿದ್ದರೆ ಕೊಲೆ ಮಾಡುತ್ತೇವೆ’ ಎಂದು ತುಳು ಭಾಷೆಯಲ್ಲಿ ಬೆದರಿಕೆ ಹಾಕಿ ಅವರ ಜೇಬಿಗೆ ಕೈ ಹಾಕಿ 10 ಸಾವಿರ ರೂ. ಮೌಲ್ಯದ ಮೊಬೆೈಲ್‌ ಫೋನ್‌ ಮತ್ತು 1 ಸಾವಿರ ರೂ. ನಗದು ಇದ್ದ ಪರ್ಸನ್ನು ಬಲವಂತವಾಗಿ ಎಳೆದುಕೊಂಡು ಹೋದರು.

ಆರೋಪಿಗಳು ಕಾರಿನ ಗಾಜುಗಳನ್ನು ಒಡೆದು ಹಾಕಿರುವುದರಿಂದ ಸುಮಾರು 35 ಸಾವಿರ ರೂ. ನಷ್ಟವುಂಟಾಗಿದೆ. ಹಲ್ಲೆಯಿಂದ ರಿತೇಶ್‌ ಅವರ ಹಣೆಗೆ ಗಾಯವಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next