ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಚಾಕು ಹಿಡಿದು ಕೊಲೆಗೈಯಲು ಬಂದವನೇ ಕೊಲೆಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಣನಕುಂಟೆ ನಿವಾಸಿ, ಫುಡ್ ಡೆಲಿವರಿ ಬಾಯ್ ಶರತ್ (25) ಕೊಲೆಯಾದ ಯುವಕ.
ಕೃತ್ಯ ಎಸಗಿದ ಲೋಕೇಶ್ ಮತ್ತು ಆತನ ಸ್ನೇಹಿತ ಸಂತೋಷ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಶುಕ್ರವಾರ ರಾತ್ರಿ ಕೋಣನಕುಂಟೆ ಕ್ರಾಸ್ ಬಳಿ ಶರತ್‌ನನ್ನು ಕೊಲೆಗೈದಿದ್ದರು. ಶರತ್ ಫುಡ್‌ಡೆಲಿವರಿ ಬಾಯ್ ಆಗಿದ್ದರೆ, ಲೋಕೇಶ್ ಆಟೋ ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. 2018ರಲ್ಲಿ ಕೋಣನಕುಂಟೆ ಕ್ರಾಸ್ ಬಳಿ ಜಯಂತ್ ಎಂಬಾತನ ಕೊಲೆಯಾಗಿತ್ತು. ಆ ಪ್ರಕರಣದಲ್ಲಿ ಲೋಕೇಶ್ ಕೂಡ ಗಾಯಗೊಂಡಿದ್ದು, ಸಾಕ್ಷಿದಾರನಾಗಿದ್ದ. ಈ ವಿಚಾರದಲ್ಲಿ ಶರತ್‌ಗೆ ಅಸಮಾಧಾನವಿತ್ತು. ಪ್ರಮುಖವಾಗಿ ಲೋಕೇಶ್ ಮತ್ತು ಶರತ್ ನಡುವೆ ಹಣಕಾಸಿನ ವಿಚಾರಕ್ಕೆ ಕೆಲ ತಿಂಗಳ ಹಿಂದೆ ಗಲಾಟೆ ಆಗಿತ್ತು.
ಬಳಿಕ ಇಬ್ಬರು ದೂರವಾಗಿದ್ದರು. ಶುಕ್ರವಾರ ರಾತ್ರಿ ಕೋಣನಕುಂಟೆ ಕ್ರಾಸ್ ಬಳಿ ಲೋಕೇಶ್ ಮತ್ತು ಸಂತೋಷ್ ಮದ್ಯ ಸೇವಿಸಿ ಮಾತನಾಡುತ್ತ ನಿಂತಿದ್ದರು. ಅದೇ ವೇಳೆ ಸ್ಥಳಕ್ಕೆ ಮದ್ಯದ ಅಮಲಿನಲ್ಲಿ ಬಂದ ಶರತ್, ಹಳೇ ವಿಚಾರ ಪ್ರಸ್ತಾಪಿಸಿ ಲೋಕೇಶ್ ಜತೆ ಜಗಳ ತೆಗಿದಿದ್ದು, ಮೂವರ ನಡುವೆ ಮಾರಾಮಾರಿ ನಡೆದಿದೆ. ಆಗ ಶರತ್ ತನ್ನ ಬಳಿಯಿದ್ದ ಚಾಕುವಿನಿಂದ ಲೋಕೇಶ್‌ನನ್ನು ಇರಿಯಲು ಯತ್ನಿಸಿದ್ದಾನೆ. ಆದರೆ, ಅದೇ ಚಾಕುವನ್ನು ಕಸಿದುಕೊಂಡ ಲೋಕೇಶ್, ಶರತ್‌ಗೆ ಇರಿದು ಕೊಲೆಗೈದಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.