ಕಲಬುರಗಿ: ಐದು ದಿನಗಳ ಹಿಂದೆ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹದ ಗುರುತು ಪತ್ತೆಯಾಗಿದ್ದು, ಸ್ನೇಹಿತನೇ ತನ್ನ ಸಹಚರದೊಂದಿಗೆ ಸೇರಿಕೊಂಡು ಅಪಹರಿಸಿ ಕೊಲೆ ಮಾಡಿ ಶವ ಎಸೆದು ಹೋಗಿರುವುದಾಗಿ ತನಿಖೆಯಲ್ಲಿ ಬಯಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಚನ್ನಬಸಪ್ಪ ನಾಯ್ಕೋಡಿ (35) ಎಂದು ಗುರುತಿಸಲಾಗಿದೆ. ಈತ ಜೇವರ್ಗಿ ತಾಲೂಕಿನ ಬಲ್ಲಾಡ್ ಗ್ರಾಮದ ನಿವಾಸಿ.
ಕಳೆದ ಶನಿವಾರ (ಜೂನ್ 10) ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಚನ್ನಬಸಪ್ಪ, ಅಂದು ರಾತ್ರಿಯೇ ಶಹಾಬಾದ್ ತಾಲೂಕಿನ ಮರುತೂರ ರೈಲ್ವೆ ನಿಲ್ದಾಣ ಸಮೀಪದ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದ.
ಈ ಕುರಿತು ವಾಡಿ ರೈಲ್ವೆ ನಿಲ್ದಾಣದ ಪೊಲೀಸರು ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಇತ್ತ, ಕುಟುಂಬದವರು ನೇಲೋಗಿ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
ಇದೀಗ ಹಣಕಾಸಿನ ವಿಷಯ ಸಂಬಂಧ ಅದೇ ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದ ಪರಿಚಯಸ್ಥರೇ ಅಪಹರಣ ಮಾಡಿ, ಕೊಲೆಗೈದು ರೈಲ್ವೆ ಹಳಿ ಮೇಲೆ ಎಸೆದು ಹೋಗಿದ್ದರು ಎಂದು ಬೆಳಕಿಗೆ ಬಂದಿದೆ.
ಸ್ನೇಹಿತನಾದ ಲಕ್ಷ್ಮಣ ಎಂಬಾತನಿಗೆ ಚನ್ನಬಸಪ್ಪ ಎರಡು ಲಕ್ಷ ರೂ. ಹಾಗೂ 10 ಗ್ರಾಂ ಬಂಗಾರ ಕೊಟ್ಟಿದ್ದ. ಇದನ್ನು ಮರಳಿ ಕೇಳಿದ ಕಾರಣಕ್ಕೆ ಲಕ್ಷ್ಮಣ ಹಾಗೂ ಇತರ ಇಬ್ಬರು ಸೇರಿಕೊಂಡು ಈ ಕೊಲೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ ಲಕ್ಷ್ಮಣ, ಶುಕ್ರವಾರವಷ್ಟೇ ಗ್ರಾಮಕ್ಕೆ ಬಂದಿದ್ದ. ಮರುದಿನವೇ ಹಣ ನೀಡಿದ ಸ್ನೇಹಿ ಚನ್ನಬಸಪ್ಪನನ್ನು ಹತ್ಯೆ ಮಾಡಿವರು ಆರೋಪ ಕೇಳಿ ಬಂದಿದೆ.