ಬೆಂಗಳೂರು: ತನ್ನ ಜತೆ ಎರಡನೇ ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ವಿವಾಹಿತ ಮಹಿಳೆಗೆ ಆಟೋ ಚಾಲಕನೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಂದಿರಾನಗರದ ಕದಿರಯನಪಾಳ್ಯ ನಿವಾಸಿ ಅಮುದಾ ಎಂಬಾಕೆ ನೀಡಿದ ದೂರಿನ ಮೇರೆಗೆ ಅಂಬೇಡ್ಕರ್ ನಗರ ನಿವಾಸಿ ನವಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ನವಾಜ್ ಮತ್ತು ಅಮುದಾ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ನವಾಜ್ ತನ್ನ ಊರಿಗೆ ತೆರಳಿದ ಮತ್ತೂಂದು ಯುವತಿ ಜತೆ ಮದುವೆಯಾಗಿದ್ದ. ಹೀಗಾಗಿ 2014ರಲ್ಲಿ ಅಮುದಾ ಏಳುಮಲೈ ಎಂಬಾತನನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಈ ಮಧ್ಯೆ ಆರೋಪಿ ಅಮುದಾ ವಾಸವಾಗಿರುವ ಮನೆ ಬಳಿ ಬಂದು, ನಿನ್ನ ಗಂಡ ಸರಿಯಿಲ್ಲ. ಸರಿಯಾಗಿ ನೋಡಿಕೊಳ್ಳುವುದಿಲ್ಲ. ತನ್ನನ್ನು ಎರಡನೇ ಮದುವೆ ಆಗುವಂತೆ ಒತ್ತಾಯಿಸಿದ್ದಾನೆ. ಆಗ ಆಕೆ ನಿರಾಕರಿಸಿದ್ದರು.
ಮತ್ತೂಂದೆಡೆ ಪತ್ನಿಯ ವರ್ತನೆಯಿಂದ ಬೇಸತ್ತ ಏಳುಮಲೈ ಪತ್ನಿ, ಮಕ್ಕಳಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು. ಅಮುದಾ ಕದಿರಯ್ಯನಪಾಳ್ಯದಲ್ಲಿ ಪೋಷಕರ ಜತೆ ವಾಸವಾಗಿದ್ದರು. ಇಲ್ಲಿಗೂ ಬಂದು ತೊಂದರೆ ಕೊಡುತ್ತಿದ್ದ ಆರೋಪಿ, ನ.25ರಂದು ರಾತ್ರಿ 10.30ರ ಸುಮಾರಿಗೆ ಮಕ್ಕಳ ಜತೆ ಅಂಗಡಿಗೆ ಹೋಗಲು ಮನೆಯಿಂದ ಹೊರಗಡೆ ಬರುತ್ತಿದ್ದಂತೆ ಅಮುದಾರ ಮೇಲೆ ದಾಳಿ ನಡೆಸಿರುವ ಆರೋಪಿ ಚಾಕುವಿನಿಂದ ಆಕೆಯ ದೇಹದ ವಿವಿಧ ಭಾಗಗಳ ಮೇಲೆ ದಾಳಿ ನಡೆಸಿ, ಹಲ್ಲೆ ಮಾಡಿದ್ದಾನೆ. ಆಕೆ ಗಾಯಗೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.