ಹುಣಸೂರು: ಅಣ್ಣ ತಮ್ಮಂದಿರ ಜಮೀನು ವಿವಾದದಲ್ಲಿತೀವ್ರ ಪಟ್ಟು ಬಿದ್ದಿದ್ದ ತಮ್ಮ ಚಿಕಿತ್ಸೆ ಫಲಕಾರಿಯಾಗದೆಸಾವನ್ನಪ್ಪಿದ್ದರೆ, ಆತನ ಪತ್ನಿ ತೀವ್ರಗಾಯಗೊಂಡು ಚಿಕಿತ್ಸೆಪಡೆಯುತ್ತಿರುವ ಘಟನೆ ತಾಲೂಕಿನ ಕೆಬ್ಬೆಕೊಪ್ಪಲಿನಲ್ಲಿ ನಡೆದಿದೆ.
ಹುಣಸೂರು ತಾಲೂಕು ಕೆಬ್ಬೆ ಕೊಪ್ಪಲಿನ ದಿ.ಚಿಕ್ಕನಿಂಗೇ ಗೌಡರ ಪುತ್ರ ಕುಮಾರ್(40) ಕೊಲೆಯಾದಾತ. ಈತನ ಪತ್ನಿ ಶೋಭಾಳಿಗೂ ತೀವ್ರ ಪೆಟ್ಟು ಬಿದ್ದಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸಣ್ಣನಿಂಗೇಗೌಡ ತಲೆ ಮರೆಸಿಕೊಂಡಿದ್ದಾನೆ.
ಘಟನೆ ವಿವರ: ದಿ.ಚಿಕ್ಕನಿಂಗೇಗೌಡರಿಗೆ ಕುಮಾರ್ ಸೇರಿ ಮೂವರು ಮಕ್ಕಳಿದ್ದು, ಅಕ್ಕನನ್ನು ಬೇರೆ ಕಡೆಗೆ ಮದುವೆ ಮಾಡಿಕೊಡಲಾಗಿತ್ತು. ಕುಮಾರ್ ತಂದೆ ಸಾವನ್ನಪ್ಪಿದ ನಂತರ ಈತನ ಸಹೋದರ ಹುಣಸೂರು ಡಿಪೋದಲ್ಲಿ ಕಂಡಕ್ಟರ್ ಆಗಿರುವ ಸಣ್ಣನಿಂಗೇಗೌಡ ತಾಯಿಗೆ ಸ್ವಲ್ಪ ಜಮೀನು ಬಿಟ್ಟು ಕೊಟ್ಟು ಉಳಿದ ಜಮೀನನ್ನು ಅಣ್ಣ ತಮ್ಮಂದಿರು ಉಳುಮೆ ಮಾಡುತ್ತಿದ್ದರು. ಸಣ್ಣನಿಂಗೇಗೌಡ ತನ್ನ ತಾಯಿ ಹೆಸರಿನಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ತೀರಿಸಿರಲಿಲ್ಲ, ಕುಮಾರ್ ಬೆಳೆದ ತಂಬಾಕು ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕಿನವರು ಅಣ್ಣನ ಸಾಲಕ್ಕೆ ವಜಾಮಾಡಿಕೊಂಡಿದ್ದರು. ಜತೆಗೆ ಜಮೀನು ಹಂಚಿಕೆ ಆಗಿರಲಿಲ್ಲ. ಈ ಬಗ್ಗೆ ಎರಡೂ ಕುಟುಂಬಗಳ ನಡುವೆ ಆಗಾಗ್ಗೆ ಸಣ್ಣ-ಪುಟ್ಟ ಗಲಾಟೆ ನಡೆಯುತ್ತಿತ್ತು. ಫೆ.20 ರಂದು ಜಗಳ ತಾರಕಕ್ಕೇರಿ ಸಣ್ಣನಿಂಗೇಗೌಡರ ಪತ್ನಿ ರೂಪ ಸೇರಿ ಕುಮಾರ್ ಮನೆ ಬಳಿ ಬಂದು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದನ್ನು ಪ್ರಶ್ನಿಸಿದ ಕುಮಾರ್‌ನಿಗೆ ಸಹೋದರ ಸಣ್ಣ ನಿಂಗೇಗೌಡ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಪ್ರಶ್ನಿಸಲು ಹೋದ ಮಗ ವಿಶ್ವಾಸ್, ಶೋಭಾಳ ಮೇಲೂ ಹಲ್ಲೆ ನಡೆಸಿದ್ದು, ಕುಮಾರ್ ಹಾಗೂ ಶೋಭಾ ತೀವ್ರಗಾಯಗೊಂಡಿ ದ್ದರು. ಅಕ್ಕ ಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿ 108 ಆ್ಯಂಬುಲೆನ್ಸ್ ಮೂಲಕ ಹುಣಸೂರು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಪೊಲೀಸರಿಂದ ತನಿಖೆ: ಶೋಭಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ಕೊಂಡ ಬಿಳಿಕೆರೆ ಠಾಣೆ ಪೊಲೀಸರು ಆರೋಪಿ ಸಣ್ಣನಿಂಗೇ ಗೌಡನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ಮೂರು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಆದರೆ ಕಾಕತಾಳಿಯವೆಂಬಂತೆ ಸಣ್ಣ ನಿಂಗೇ ಗೌಡ ಬಿಡುಗಡೆಯಾಗಿ ಹೊರಬಂದ ಮಾರನೇ ದಿನವೇ ತಮ್ಮ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತೀವ್ರ ಗಾಯಗೊಂಡಿರುವ ಶೋಭಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಸಣ್ಣನಿಂಗೇಗೌಡನನ್ನು ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.