ಹುಣಸೂರು: ಬೈಕ್ ಸವಾರರಿಂದ ವಾಯುವಿಹಾರ ನಡೆಸುತ್ತಿದ್ದ ಗೃಹಿಣಿಯರ ಮಾಂಗಲ್ಯ ಸರ ಕಿತ್ತುಕೊಳ್ಳಲು ವಿಫಲಯತ್ನ ನಡೆಸಿರುವ ಘಟನೆ ನಗರದಲ್ಲಿ ಬೆಳಂಬೆಳಗ್ಗೆ ನಡೆದಿದ್ದು, ನಾಗರೀಕರು ಆತಂಕಕ್ಕೊಳಗಾಗಿದ್ದಾರೆ.
ನಗರದ ಬ್ರಾಹ್ಮಣರ ಬೀದಿಯ ರಾಘವೆಂದ್ರಸ್ವಾಮಿ ಮಟಡದ ಸರ್ಕಲ್ ನಲ್ಲಿ ಘಟನೆ ನಡೆದಿದ್ದು, ಶನಿವಾರ ಮುಂಜಾನೆ 5 ರ ವೇಳೆಯಲ್ಲಿ ಸರ್ಕಲ್ ಬಳಿ ವಾಕಿಂಗ್ ಮಾಡುತ್ತಿದ್ದ ಇಬ್ಬರು ಗೃಹಿಣಿಯರ ಬಳಿ ಬಂದ ಅಪರಿಚಿತ ಬೈಕ್ ಸವಾರರು ಬೈಕ್ ಸ್ಲೋ ಮಾಡಿದ್ದಾರೆ. ಈ ವೇಳೆ ಅನುಷಾರವರು ಪರಿಚಿತರಿರಬೇಕೆಂದು ಹಿಂದೆ ತಿರುಗುವಷ್ಟರಲ್ಲಿ ಹಿಂಬದಿಯ ಸವಾರ ಕುತ್ತಿಗೆಯಲ್ಲಿದ್ದ ಮಾಂಗಲ್ಯದ ಸರ ಕಿತ್ತುಕೊಳ್ಳಲು ಯತ್ನಿಸಿದ ವೇಳೆ ಜೋರಾಗಿ ಕೂಗಿ ಕೊಂಡು ಎಳೆದಿದ್ದರಿಂದ ಗಾಬರಿಗೊಂಡ ಬೈಕ್ ಸವಾರರು ಪರಾರಿಯಾಗಿದ್ದಾರೆ.
ಹೆದರಿದ ಗೃಹಿಣಿಯರು ತಕ್ಷಣವೇ ಪಕ್ಕದಲ್ಲೇ ಇರುವ ತಮ್ಮ ಮನೆಗೆ ಓಡಿ ಹೋಗಿ ವಿಷಯ ತಿಳಿಸಿದ್ದರಿಂದ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಬೈಕ್ ಸವಾರರು ನಾಪತ್ತೆಯಾಗಿದ್ದಾರೆ.
ಮನವಿ:
ಎರಡು ವರ್ಷದ ಕೊರೋನಾ ನಂತರದಲ್ಲಿ ಇತ್ತೀಚೆಗೆ ಬೆಳಗ್ಗೆ ಮತ್ತು ಸಂಜೆ ವೇಳೆ ವಾಯು ವಿಹಾರ ನಡೆಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು. ನಗರದ ಪ್ರಮುಖ ರಸ್ತೆಗಳು. ಹೊಸ ಬಡಾವಣೆ, ಎಪಿಎಂಸಿ ರಸ್ತೆ, ನಗರಸಭೆ ಮೈದಾನ, ಚಿಕ್ಕ ಹುಣಸೂರು ರಸ್ತೆಯಲ್ಲಿ ಮಹಿಳೆಯರು ವಾಕಿಂಗ್ ಗೆ ತೆರಳುತ್ತಾರೆ. ಈ ರಸ್ತೆಗಳಲ್ಲಿ ಬೀದಿ ದೀಪಗಳೂ ಇಲ್ಲ. ಜೊತೆಗೆ ರಕ್ಷಣೆಯೂ ಇಲ್ಲದಂತಾಗಿದ್ದು, ನಗರದಲ್ಲಿ ಕಳ್ಳತನದ ಜೊತೆಗೆ ಇದೀಗ ಸರಕಳ್ಳರ ಹಾವಳಿ ಕಂಡು ಬಂದಿದ್ದು,ಪೊಲೀಸರು ಇತ್ತ ಹೆಚ್ಚಿನ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.