ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಸಾವನ್ನಪ್ಪಿದ್ದ ಹುಲಿಯ ಚರ್ಮ,ಉಗುರು-ಮೀಸೆ ಅಪಹರಿಸಿ ಮಾರಾಟಕ್ಕೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಮೇತ ಕೊಡಗಿನ ಅರಣ್ಯ ಸಂಚಾರಿ ದಳದ ಎಸ್.ಐ.ಸವಿ ನೇತೃತ್ವದ ತಂಡ ವಶಪಡಿಸಿಕೊಂಡಿದ್ದಾರೆ.
ಕೊಡಗಿನ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ತಟ್ಟಳ್ಳಿ ಗಿರಿಜನ ಹಾಡಿಯ ರಮೇಶ, ರಾಜೇಶ್, ಹರೀಶ್, ವಿನು ಬಂಧಿತ ಆರೋಪಿಗಳು. ಇವರಿಂದ ಒಂದು ಹುಲಿ ಚರ್ಮ, 7 ಉಗುರುಗಳು, ಎರಡು ಕಾಲುಗಳು, 9 ಮೀಸೆಯನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ: ಆರೋಪಿಗಳು ಫೆ.೧೪ರಂದು ನಾಗರಹೊಳೆ ಹುಲಿ ಸಂರಕ್ಷಣಾ ಬಫರ್ ವಲಯದ ಅರಣ್ಯದಲ್ಲಿ ಸಾವನ್ನಪ್ಪಿದ್ದ ಹುಲಿಯ ಅಂಗಾಗಗಳನ್ನು ತುಂಡರಿಸಿ ತಂದು ಚರ್ಮ, ಮೀಸೆ, ಉಗುರು ಬೇರ್ಪಡಿಸಿದ್ದ ಆರೋಪಿಗಳು ಸಿದ್ದಾಪುರ ಠಾಣಾ ವ್ಯಾಪ್ತಿಯ ಮಾಲ್ದಾರೆ-ಸಿದ್ದಾಪುರ ಮುಖ್ಯರಸ್ತೆಯ ಜೋಸ್ ಕುರಿಯರವರ ಕಾಫಿ ತೋಟಕ್ಕೆ ಹೊಂದಿಕೊಂಡ ರಸ್ತೆ ಬದಿಯಲ್ಲಿ ಚೀಲದಲ್ಲಿ ಹಾಕಿಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಕೊಡಗು ಅರಣ್ಯ ಸಂಚಾರಿದಳದ ಎಸ್.ಐ. ಸವಿಯವರ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಗಳನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹಿಂದೆಯೂ ನಡೆದಿತ್ತು:
ಕಲ್ಲಹಳ್ಳ ವಲಯದಲ್ಲಿ ಕಳೆದ ೬ ತಿಂಗಳ ಹಿಂದೆ ಹುಲಿಯನ್ನು ಕೊಂದಿದ್ದ ಆರೋಪಿಗಳನ್ನು ಬಂಧಿಸಿದ್ದ ಪ್ರಕರಣದ ಮಾಸುವ ಮುನ್ನವೇ ಸತ್ತ ಹುಲಿಯ ಅಂಗಾಂಗ ತುಂಡರಿಸಿ ಹೊತ್ತಯ್ದಿರುವುದು ಆತಂಕಕ್ಕೀಡು ಮಾಡಿದೆ.
ಉನ್ನತ ಮಟ್ಟದ ತನಿಖೆ ಆಗಲಿ: ಹುಲಿ ಸಹಜವಾಗಿ ಸಾವನ್ನಪ್ಪಿತ್ತೋ ಅಥವಾ ಆರೋಪಿಗಳು ಕೊಂದಿದ್ದಾರೋ ಎಂಬುದು ಉನ್ನತ ಮಟ್ಟದ ತನಿಖೆ ನಡೆಯಬೇಕೆಂಬುದು ವನ್ಯಪ್ರೀಯರ ಒತ್ತಾಸೆಯಾಗಿದೆ.