ಹುಣಸೂರು: ಸಾಲದ ಬಾಧೆಗೆ ಸಿಲುಕಿ ಕಳೆದ ಹತ್ತು ದಿನಗಳ ಹಿಂದೆ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ರೈತ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ಘಟನೆ ಹನಗೋಡು ಹೋಬಳಿ ಕಣಗಾಲು ಗ್ರಾಮದಲ್ಲಿ ನಡೆದಿದೆ.
ಕಣಗಾಲು ಗ್ರಾಮದ ರಾಮೇಗೌಡರ ಮಗ ಜಯಣ್ಣೇಗೌಡ (45) ಸಾಲ ಭಾಧೆಯಿಂದ ಸಾವನ್ನಪ್ಪಿದ ದುರ್ದೈವಿ ಆಗಿದ್ದು ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
ಮೃತ ರೈತ ಜಯಣ್ಣೇಗೌಡ ರ ಹೆಸರಿನಲ್ಲಿ 4.39 ಎಕರೆ ಜಮೀನು ಹೊಂದಿದ್ದು ಕಳೆದ 7 ವರ್ಷಗಳ ಹಿಂದೆ ಬ್ಯಾಂಕ್ ಆಫ್ ಬರೋಡ (ಅಂದಿನ ವಿಜಯ ಬ್ಯಾಂಕ್) ನಲ್ಲಿ 5 ಲಕ್ಷ ರೂ ಸಾಲ ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ 6 ಲಕ್ಷ ರೂ ಗೂ ಹೆಚ್ಚು ಕೈ ಸಾಲ ಮಾಡಿಕೊಂಡಿದ್ದು, ಮಾಡಿದ್ದಾರೆ. ಇದಲ್ಲದೆ ಅಂದಿನಿಂದ ಇಲ್ಲಿಯವರೆಗೂ ಸಾಲ ತೀರಿಸಲಾಗದೆ ಮಾಡಿದ ಬೆಳೆ ಹಿಡಿಯದೆ ಸಾಲದ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದರು. ಪ್ರಸ್ತುತ ಸಾಲಿನಲ್ಲಿ ತಮ್ಮ ಜಮೀನಿನಲ್ಲಿ ತಂಬಾಕು, ಮುಸುಕಿನ ಜೋಳ ಹಾಗೂ ರಾಗಿಯನ್ನು ಬೆಳೆದಿದ್ದು ಅತಿಯಾದ ಮಳೆಯಿಂದ ಈ ವರ್ಷವೂ ಸಹ ಬೆಳೆ ಕೈ ಹಿಡಿಯದ ಕಾರಣ ಕಳೆದ ಹತ್ತು ದಿನಗಳ ಹಿಂದೆ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಕಾಲದಲ್ಲಿ ಮನೆಯವರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಳೆದ 5-6 ತಿಂಗಳಿನಿಂದ ಬ್ಯಾಂಕ್ ಹಾಗೂ ಕೈ ಸಾಲಗಾರರರು ಹಣ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದರಿಂದ ನನ್ನ ಪತಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತ ಜಯಣ್ಣೆಗೌಡರ ಪತ್ನಿ ಮಮತಾ ದೂರು ನೀಡಿದ್ದು ಪೋಲಿಸ್ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆಯನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು , ನಾಳೆ ಶುಕ್ರವಾರ ಬೆಳಿಗ್ಗೆ ಕಣಗಾಲು ಗ್ರಾಮದ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಸಹೋದರ ಮಲ್ಲೇಶ್ ಕಣಗಾಲ್ ತಿಳಿಸಿದ್ದಾರೆ.