ಹುಣಸೂರು:ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಹೊಸಪುರ ಗ್ರಾಮದಲ್ಲಿ ವಿದ್ಯುತ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕರ್ತವ್ಯ ನಿರತ ಲೈನ್‌ಮನ್ ಟಿ.ಸಿ.ಮೇಲೆಯೇ ದಾರುಣವಾಗಿ ಮೃತಪಟ್ಟಿದ್ದರೆ, ಮತ್ತೊರ್ವ ಲೈನ್‌ಮನ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ನಿವಾಸಿ ಸಿದ್ದನಾಯ್ಕರ ಪುತ್ರ ಕರೀನಾಯ್ಕ(48) ಮೃತ, ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಇವರೊಂದಿಗಿದ್ದ ಚಿಕ್ಕಾಡಿಗನಹಳ್ಳಿಯ ಲೈನ್‌ಮನ್ ಪ್ರಶಾಂತ್ ಗಾಯಗೊಂಡವರು.
ಘಟನೆ ವಿವರ: ಬಿಳಿಕೆರೆ ಉಪವಿಭಾಗ ವ್ಯಾಪ್ತಿಯ ಗೆಜ್ಜಯ್ಯನವಡ್ಡರಗುಡಿ ವಿದ್ಯುತ್ ವಿತರಣಾ ಕೇಂದ್ರದ ಲೈನ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕರೀನಾಯ್ಕ ಹಾಗೂ ಪ್ರಶಾಂತ್ ಸೋಮವಾರ ಮದ್ಯಾಹ್ನ ಹೊಸಪುರದ ಬಳಿ ವಿದ್ಯುತ್ ಲೈನ್ ದುರಸ್ತಿಗಾಗಿ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸ್ಥಗಿತಗೊಳಿಸಲು ಸೂಚಿಸಿ, ಹೊಸಪುರಕ್ಕೆ ತೆರಳಿ ಇತರೆ ಸಿಬ್ಬಂದಿಗಳೊಂದಿಗೆ ದುರಸ್ತಿಗೊಳಿಸುತ್ತಿದ್ದರು. ಈವೇಳೆ ವಿದ್ಯುತ್ ಕಂಬ ಹತ್ತಿ ಲೈನ್ ಸರಿಪಡಿಸುತ್ತಿದ್ದ ವೇಳೆಯೇ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ್ದು, ಕರೀನಾಯ್ಕರು ವಿದ್ಯುತ್ ಲೈನ್ ಮೇಲೆಯೇ ಸಾವನ್ನಪ್ಪಿದ್ದರೆ, ಜೊತೆಗಿದ್ದ ಪ್ರಶಾಂತ್‌ಗೂ ತೀವ್ರಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಸಂಪರ್ಕ ಕಡಿತಗೊಳಿಸಿ ದುರಸ್ತಿಗೊಳಿಸುತ್ತಿದ್ದ ವೇಳೆಯೇ ಯಾರು ಮತ್ತೆ ಸಂಪರ್ಕ ಕಲ್ಪಿಸಿದವರ್‍ಯಾರೆಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರೊಬ್ಬರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಬೆಂಕಿಪುರದ ಕುಟುಂಬದ ಮಂದಿ ಸ್ಥಳದಲ್ಲಿ ಜಮಾಯಿಸಿ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರಬೇಕು, ಸೂಕ್ತ ಪರಿಹಾರ ಹಾಗೂ ತಪ್ಪಿಕಸ್ಥರ ವಿರುದ್ದ ಕ್ರಮವಾಗಬೇಕೆಂದು ಪಟ್ಟು ಹಿಡಿದರು.
ಘಟನೆ ನಡೆದ ಬಗ್ಗೆ ಮಾಹಿತಿ ಪಡೆದ ಶಾಸಕ ಎಚ್.ಪಿ.ಮಂಜುನಾಥ್, ಚೆಸ್ಕಾಂ ಇ.ಇ.ಸುನಿಲ್, ಡಿ.ವೈ.ಎಸ್.ಪಿ.ರವಿಪ್ರಸಾದ್, ಇನ್ಸ್‌ಪೆಕ್ಟರ್ ರವಿಕುಮಾರ್ ಮತ್ತಿತರ ಅಧಿಕಾರಿಗಳು ತೆರಳಿದ ವೇಳೆ ಆಕ್ರೋಶಗೊಂಡಿದ್ದ ಗ್ರಾಮಸ್ಥರು ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೊನೆಗೆ ಗ್ರಾಮಸ್ಥರ ಮನವೊಲಿಸಿ ಶವವನ್ನು ಕೆಳಕ್ಕಿಳಿಸಿ, ಬಿಳಿಕೆರೆ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.