ಚಿಕ್ಕಬಳ್ಳಾಪುರ: ಮಧುವೆಯಾಗಿ ಕೇವಲ 5 ತಿಂಗಳಿನಲ್ಲಿ ಜನಿಸಿದ ಮಗುವನ್ನು ಮಾರಾಟ ಮಾಡಿದ ವಿವಾಹಿತ ಮಹಿಳೆ ಸಹಿತ ನಾಲ್ವರನ್ನು ಪೋಲಿಸರನ್ನು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎನ್.ಹೊಸಹಳ್ಳಿಯ ನಿವಾಸಿ ಚಂದನ,ಆಕೆಯ ತಂದೆ ನಾಗರಾಜ್,ತಾಯಿ ನಾಗಮಣಿ ಹಾಗೂ ಮಗುವನ್ನು ದತ್ತು ಪಡೆದುಕೊಂಡ ಬಾಗಳೂರು ಮೂಲದ ರೂಪಾವತಿ ಬಂಧಿತ ಆರೋಪಿಗಳು.
ಎನ್.ಹೊಸಹಳ್ಳಿಯ ನಿವಾಸಿ ಚಂದನ ಎಂಬಾಕೆಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಪ್ರಭಾಕರ್ ಎಂಬಾತ ನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು ಆದರೇ ಮದುವೆಯಾಗಿ ಕೇವಲ ಐದು ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದ ತನ್ನ ಪತ್ನಿಯ ವ್ಯಕ್ತಿತ್ವದ ಕುರಿತು ಅನುಮಾನ ವ್ಯಕ್ತಪಡಿಸಿದ ಪ್ರಭಾಕರ್ ಪತ್ನಿ ಚಂದನ ಮತ್ತು ಮಗುವನ್ನು ಆಕೆ ತವರು ಮನೆಗೆ ಕಳುಹಿಸಿದರೆನ್ನಲಾಗಿದೆ.
ತವರು ಮನೆಗೆ ಹೋದ ಚಂದನ ಮಗುವನ್ನು ಸಾಕಿ ಸಲುಹುವ ಬದಲಿಗೆ ಬಾಗಳೂರು ಮೂಲದ ರೂಪಾವತಿ-ಮಲ್ಲೇಶ್ ದಂಪತಿಗಳಿಗೆ ಮಾರಾಟ ಮಾಡಿದ್ದಾಳೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತರಾದ ಅಧಿಕಾರಿಗಳು ಪೋಲಿಸರ ಸಹಕಾರದಿಂದ ಮಗುವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ ಚಂದನ ಸತ್ಯವನ್ನು ಮರೆಮಾಚಿ ಬೇರೆಯೊಬ್ಬನ ಜೊತೆಯಲ್ಲಿ ವಿವಾಹವಾಗಿದ್ದಳು ಮದುವೆಯಾದ ಕೇವಲ 5 ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದ ಚಂದನನ ವ್ಯಕ್ತಿತ್ವದ ಮೇಲೆ ಸಂಶಯ ವ್ಯಕ್ತಪಡಿಸಿದ ಪತಿ ಪ್ರಭಾಕರ್ ಆಕೆಯನ್ನು ತವರು ಮನೆಗೆ ಕಳುಹಿಸಿದ್ದ ಈ ಮಧ್ಯೆ ಮಗುವನ್ನು ಪೋಷಣೆ ಮಾಡಿ ಅಥವಾ ಸರ್ಕಾರದ ವಶಕ್ಕೆ ನೀಡುವ ಬದಲಿಗೆ ಮಾರಾಟ ಮಾಡಿದ್ದಾಳೆ.
ಈ ಸಂಬಂಧ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ನೀಡಿದ ದೂರು ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರದ ಮಹಿಳಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಪ್ರಸ್ತುತ ಕೆವಿ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗುವನ್ನು ಪೋಷಣೆ ಮಾಡುತ್ತಿದ್ದಾರೆ.