ಬೆಂಗಳೂರು: ಯುವತಿಯರಿಗೆ ಚುಡಾಯಿಸುತ್ತಿದ್ದವರಿಗೆ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬನನ್ನು ಕೊಲೆಗೈದಿದ್ದ ಇಬ್ಬರು ಸಹೋದರರು ಸೇರಿ ಆರು ಮಂದಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಕೆ.ಪಿ. ಅಗ್ರಹಾರ ನಿವಾಸಿಗಳಾದ ಸೂರ್ಯ (32) ಮತ್ತು ಆತನ ಸಹೋದರ ಚಂದನ್(28) ಹಾಗೂ ಸಹಚರರಾದ ಪ್ರಮೋದ್ (32), ಸತೀಶ್ (27), ಚೇತನ್ (30) ಬಂಧಿತರು. ಆರೋಪಿಗಳು ಮಾ. 11ರಂದು ರಾತ್ರಿ ಥಾಮಸ್ (20) ಅವರಿಗೆ ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ದೂರುದಾರ ಲಕ್ಷ್ಮೀಕಾಂತ್ ಮತ್ತು ಕೊಲೆಯಾದ ಥಾಮಸ್ ಸ್ನೇಹಿತರಾಗಿದ್ದಾರೆ. ಕೆಲ ದಿನಗಳಿಂದ ಆರೋಪಿಗಳ ಪೈಕಿ ಚಂದನ್, ದೂರುದಾರರ ಮನೆ ಮುಂಭಾಗ ಬೈಕ್ ವೀಲ್ಲಿಂಗ್ ಮಾಡುವುದು, ಸಿಗರೇಟ್ ಸೇದುವುದು ಮಾಡುತ್ತಿದ್ದ. ಈ ವಿಚಾರವನ್ನು ಲಕ್ಷ್ಮೀಕಾಂತ್, ಥಾಮಸ್ ಬಳಿ ಹೇಳಿಕೊಂಡಿದ್ದಾನೆ. ಬಳಿಕ ಮತ್ತೂಬ್ಬ ಸ್ನೇಹಿತ ಮನೋಜ್ ಎಂಬಾತ ಜತೆ ಹೋಗಿ, ಚಂದನ್ ಮತ್ತು ಸೂರ್ಯಗೆ ಬುದ್ದಿ ಹೇಳಿದ್ದಾರೆ. ಆದರೂ ಆರೋಪಿಗಳು ಸುಧಾರಿಸಿರಲಿಲ್ಲ. ಕೆಲ ದಿನಗಳ ಬಳಿಕ ಥಾಮಸ್, ಲಕ್ಷ್ಮೀಕಾಂತ್ ಮತ್ತು ಮನೋಜ್, ಆರೋಪಿಯ ತಂದೆ ರಮೇಶ್‌ಗೆ, ತಮ್ಮ ಮಗ ಮನೆ ಮುಂದೆ ಬಂದು ಕಿರುಕುಳ ಕೊಡುತ್ತಿದ್ದಾನೆ. ಆತನಿಗೆ ಬುದ್ದಿವಾದ ಹೇಳುವಂತೆ ಮನವಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಚರ್ಚ್ ಬಳಿ ಕರೆದೊಯ್ದು ಕೊಲೆ
ಅದರಿಂದ ಆಕ್ರೋಶಗೊಂಡ ಸಹೋದರರು, ಮಾತನಾಡ ಬೇಕೆಂದು ಮೇರಿಮತಾ ಚರ್ಚ್ ಬಳಿ ಕರೆದೊಯ್ದಿದ್ದಾರೆ. ಆಗ ಸೂರ್ಯ, ಚಂದನ್ ಹಾಗೂ ಇತರರು ಏಕಾಏಕಿ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ವಿಕೋಪಕ್ಕೆ ಹೋದಾಗ ಆರೋಪಿಗಳು ಡ್ರ್ಯಾಗರ್‌ನಿಂದ ಥಾಮಸ್‌ನ ಬೆನ್ನು ಮತ್ತು ತೊಳಿನ ಭಾಗಕ್ಕೆ ಬಲವಾಗಿ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ಪೈಕಿ ಸಹೋದರರ ವಿರುದ್ಧ ಈ ಹಿಂದೆ ಇದೇ ರೀತಿಯ ಆರೋಪಗಳು ಕೇಳಿ ಬಂದಿದ್ದವು. ಜತೆಗೆ ಗುಂಪು ಸೇರಿಗೊಂಡು ಸಾರ್ವಜನಿಕರಿಗೆ ತೊಂದರೆ ಕೊಡುವುದು, ಶಾಂತಿಗೆ ಭಂಗ ತರುವಂತಹ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಅಲ್ಲದೆ, ಚಂದನ್, ಬೈಕ್ ವೀಲ್ಲಿಂಗ್ ಮಾಡಿಕೊಂಡು ಯುವತಿಯರನ್ನು ಚುಡಾಯಿಸುತ್ತಿದ್ದ. ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆ ಕೊಡುತ್ತಿದ್ದ ಎಂಬುದು ಗೊತ್ತಾಗಿತೆ. ಈ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.