ಬೆಂಗಳೂರು: ಕಳ್ಳರು ಮಾತ್ರವಲ್ಲ ಭಿಕ್ಷೆ ಬೇಡುವವರ ಮೇಲೂ ವ್ಯಾಪಾರಿಗಳು ಹೆಚ್ಚಿನ ಎಚ್ಚರವಹಿಸಬೇಕಿದೆ. ಭಿಕ್ಷೆ ಬೇಡುವ ನೆಪದಲ್ಲಿ ಅಂಗಡಿಗೆ ಬರುವ ಮಹಿಳೆಯರು ಮಾಲಿಕರ ಗಮನ ಬೇರೆಡೆ ಸೆಳೆದು ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಆರು ಮಹಿಳೆಯರ ತಂಡವೊಂದು ಈ ರೀತಿಯ ಕೃತ್ಯದಲ್ಲಿ ತೊಡಗಿದ್ದು, ಮಹಿಳೆಯೊಬ್ಬರ ಈ ಕೃತ್ಯ ಅಂಗಡಿಯೊಂದರ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎಪಿಎಂಸಿ ವ್ಯಾಪ್ತಿಯಲ್ಲಿರುವ ಅಂಗಡಿಯಲ್ಲಿ ಈ ರೀತಿಯ ಕೃತ್ಯಗಳು ನಡೆಯುತ್ತಿದ್ದು, ಫೆ.23ರಂದು ಎಪಿಎಂಸಿಯ ಅಂಗಡಿಗೆ ಮಹಿಳೆಯೊಬ್ಬರು ಭಿಕ್ಷೆ ಬೇಡುವ ನೆಪದಲ್ಲಿ ಬಂದಿದ್ದಾಳೆ. ಈ ವೇಳೆ ಮಾಲಿಕ ಆಕೆಗೆ ಹಣ ಕೊಟ್ಟು ಕಳುಹಿಸಲು ಗಲ್ಲಾ ಪೆಟ್ಟಿಗೆಯಿಂದ ಎದ್ದು ಬಂದಿದ್ದಾರೆ. ಅಷ್ಟರಲ್ಲಿ ಮಹಿಳಾ ಗ್ರಾಹಕರೊಬ್ಬರು ವ್ಯಾಪಾರಕ್ಕಾಗಿ ಬಂದಿದ್ದರು. ಅವರ ಕಡೆ ಮಾಲಿಕರ ಗಮನ ಹರಿಸುತ್ತಿದ್ದಂತೆ ನಿಧಾನವಾಗಿ ಕ್ಯಾಶ್ ಕೌಂಟರ್ ಬಳಿ ಬಂದ ಮಹಿಳೆ, ಗಲ್ಲಾ ಪೆಟ್ಟಿಗೆಯಲ್ಲಿದ್ದ ಸಾವಿರಾರು ರೂ. ಹಣ ಕದ್ದು ಜನಜಂಗುಳಿಯಲ್ಲಿ ನಾಪತ್ತೆಯಾಗಿದ್ದಾಳೆ. ಕೆಲ ಹೊತ್ತಿನ ಬಳಿಕ ಗಲ್ಲಾ ಪೆಟ್ಟಿಗೆ ಬಳಿ ಬಂದಾಗ ಮಾಲಿಕರಿಗೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಹೊರಗಡೆ ಹೋಗಿ ನೋಡಿದಾಗ ಮಹಿಳೆ ನಾಪತ್ತೆಯಾಗಿದ್ದಳು. ಬಳಿಕ ಸಿ.ಸಿ. ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಭಿಕ್ಷೆ ಬೇಡಲು ಬಂದ ಮಹಿಳೆಯೇ ಕಳ್ಳತನ ಎಸಗಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.